ಮುಂಬೈ: ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಮುಂಬುರುವ ಐಪಿಎಲ್ನಲ್ಲಿ ಅಹ್ಮದಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಐಪಿಎಲ್ನ ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ. ಇವರಿಗೆ ಭಾರತ 2011ರ ಏಕದಿನ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ಗ್ಯಾರಿ ಕಿರ್ಸ್ಟನ್ ಕೂಡ ಮೆಂಟರ್ ಆಗಿ ಅಹ್ಮದಾಬಾದ್ ತಂಡ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನ ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸಲಾಗಿದೆ. ಹೊಸ ತಂಡಗಳಾಗಿ ಅಹ್ಮದಾಬಾದ್ ಮತ್ತು ಲಕ್ನೋ ತಂಡಗಳು ಸೇರಿಕೊಂಡಿವೆ. ಆರ್ಪಿ ಸಂಜೀವ್ ಗೋಯಂಕ ಗ್ರೂಪ್ ಲಕ್ನೋ ತಂಡವನ್ನು 7090 ಕೋಟಿ ರೂ ನೀಡಿ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ಸ್ ಪಾಲುದಾರ ಸಂಸ್ಥೆಯ ಭಾಗವಾದ ಇರೆಲಿಯಾ ಕಂಪನಿ 5625 ಕೋಟಿ ರೂ ನೀಡಿ ಅಹ್ಮದಾಬಾದ್ ತಂಡವನ್ನು ಖರೀದಿಸಿದೆ.
ಟೀಮ್ ಇಂಡಿಯಾ ಮಾಜಿ ಬೌಲರ್ ಆಶಿಶ್ ನೆಹ್ರಾ ಅಹ್ಮದಾಬಾದ್ನ ಮುಖ್ಯಕೋಚ್ ಆಗಿ ಸಹಿ ಮಾಡಿದ್ದಾರೆ. ಇವರ ಜೊತೆಗೆ ಇಂಗ್ಲೆಂಡ್ ಮಾಜಿ ಆರಂಭಿಕ ಬ್ಯಾಟರ್ ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಮತ್ತು ಬ್ಯಾಟಿಂಗ್ ಕೋಚ್ ಹಾಗೂ ಭಾರತದ ಮಾಜಿ ಕೋಚ್ ಕಿಸ್ಟರ್ನ್ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ ಎಂದು ನಾನು ಕೇಳ್ಪಟ್ಟಿದ್ದೇನೆಂದು ಐಪಿಎಲ್ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.