ಮುಂಬೈ(ಮಹಾರಾಷ್ಟ್ರ): ಗುರುವಾರದಿಂದ ಇಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಇಂಗ್ಲೆಂಡ್ ವಿರುದ್ಧ ಪ್ರದರ್ಶಿಸಿದ ಅದೇ ಆಟದ ತೀವ್ರತೆಯನ್ನು ಕಾಯ್ದುಕೊಳ್ಳಬೇಕಿದೆ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ತಿಳಿಸಿದ್ದಾರೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್‌ನಲ್ಲಿ ಭಾರತ ದಾಖಲೆಯ 347 ರನ್‌ಗಳ ಅಂತರದ ಗೆಲುವು ಸಾಧಿಸಿತ್ತು. ಇದು ಮಹಿಳಾ ಕ್ರಿಕೆಟ್ನಲ್ಲಿ ದಾಖಲೆಯ ರನ್ ಅಂತರದ ವಿಜಯವಾಗಿದೆ. ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಭಾರತ ಸಜ್ಜಾಗುತ್ತಿದ್ದು, ಜಯದ ಹುರುಪನ್ನು ಹಾಗೆಯೇ ಮುಂದುವರೆಸುವ ಚಿಂತನೆಯಲ್ಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರು ವೈಟ್ ಜರ್ಸಿಯಲ್ಲಿ 10 ಬಾರಿ ಮುಖಾಮುಖಿ ಆಗಿದ್ದಾರೆ. ಭಾರತದ 10ರಲ್ಲೂ ಸೋಲು ಕಂಡಿದೆ. ಕಾಂಗರೂ ಪಡೆಯ ವಿರುದ್ಧ ಚೊಚ್ಚಲ ಜಯಕ್ಕೆ ತಂಡ ಎದುರು ನೋಡುತ್ತಿದೆ. ಆದರೂ, ಬ್ಯಾಕ್-ಟು-ಬ್ಯಾಕ್ ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಕಾರಣ ಫಿಟ್‌ನೆಸ್ ಆಟಗಾರ್ತಿಯರಿಗೆ ಸವಾಲಾಗಲಿದೆ.
ಪಂದ್ಯದ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, "ಕಳೆದ ಟೆಸ್ಟ್‌ನಲ್ಲಿ ಆಡಿದ ರೀತಿಯಲ್ಲೇ, ನಾವು ಈ ಪಂದ್ಯವನ್ನೂ ಕೊಂಡೊಯ್ಯಲು ಬಯಸುತ್ತೇವೆ. ಇದು ತುಂಬಾ ರೋಮಾಂಚನಕಾರಿಯಾಗಿದೆ. ಆಸ್ಟ್ರೇಲಿಯಾ ಉತ್ತಮ ತಂಡ. ಎದುರಾಳಿ ತಂಡವನ್ನು ಮಣಿಸಲು ಪ್ರತಿಯೊಬ್ಬರೂ ಬಯಸುತ್ತಾರೆ" ಎಂದರು.
ಆಸ್ಟ್ರೇಲಿಯಾದ ಯಶಸ್ವಿ ನಾಯಕಿಯಾಗಿದ್ದ ಮೆಗ್ ಲ್ಯಾನಿಂಗ್ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅವರ ನಿವೃತ್ತಿಯ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರಸ್ತುತ ಸರಣಿ ಪ್ರವಾಸ ಕೈಗೊಂಡಿದೆ. ಅವರ ಸ್ಥಾನವನ್ನು ಅನುಭವಿ ಆಟಗಾರ್ತಿ ಅಲಿಸ್ಸಾ ಹೀಲಿ ಅವರಿಗೆ ನೀಡಲಾಗಿದೆ.
ಮೆಗ್ ನಿವೃತ್ತಿ ಆಸೀಸ್‌ಗೆ ಕಾಡುವುದಿಲ್ಲ: ಆಸ್ಟ್ರೇಲಿಯಾ ಬಲಿಷ್ಠ ತಂಡ ಹೊಂದಿರುವುದರಿಂದ ಲ್ಯಾನಿಂಗ್ ಅನುಪಸ್ಥಿತಿಯು ಹೆಚ್ಚಿನ ವ್ಯತ್ಯಾಸ ಉಂಟುಮಾಡುವುದಿಲ್ಲ ಎಂದು ಕೌರ್ ಅಭಿಪ್ರಾಯ ಪಟ್ಟಿದ್ದಾರೆ. "ಅವರು ಸಮತೋಲಿತ ತಂಡ ಹೊಂದಿದ್ದಾರೆ. ಪ್ರತಿಯೊಬ್ಬರೂ ಎಲ್ಲಾ ಸ್ವರೂಪಗಳ ಅನುಭವ ಹೊಂದಿದ್ದಾರೆ. ನಾವು ಮೆಗ್ ಲ್ಯಾನಿಂಗ್ ಇಲ್ಲ ಎಂದು ಅವರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅವರದು ಎಷ್ಟು ಒಳ್ಳೆಯ ತಂಡ ಎಂದು ಯೋಚಿಸುವುದಕ್ಕಿಂತ ನಾವು ಉತ್ತಮವಾಗಿ ಏನು ಮಾಡಬಹುದು ಎಂದು ಯೋಚಿಸಬೇಕಾಗಿದೆ" ಎಂದು ಕೌರ್ ಹೇಳುತ್ತಾರೆ.
ಒತ್ತಡ ನಿಯಂತ್ರಣ ಸವಾಲು: "ನಾವು ಬ್ಯಾಕ್-ಟು-ಬ್ಯಾಕ್ ಟೆಸ್ಟ್‌ಗಳನ್ನು ಆಡುತ್ತಿರುವಾಗ, ಚೇತರಿಸಿಕೊಳ್ಳುವುದು ಮತ್ತೆ ಫ್ರೆಶ್ ಆಗಿ ಆಡುವುದು ಮುಖ್ಯ. ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್ ಮೂರು ದಿನಗಳವರೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ್ದಾರೆ. ಅವರ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ಆಟಕ್ಕೆ ಸಿದ್ಧರಾಗಿರಬೇಕು ಮತ್ತು ಅದಕ್ಕೆ ತಕ್ಕಂತೆ ತರಬೇತಿ ಪಡೆಯುತ್ತಿದ್ದೇವೆ. ಕಡಿಮೆ ಹೊರೆ ಹೊಂದಿರುವವರು ಹೆಚ್ಚು ನೆಟ್ಸ್‌ನಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದೇವೆ. ಎರಡು ಟೆಸ್ಟ್ಗಳ ನಡುವೆ ಕೇವಲ ನಾಲ್ಕು ದಿನಗಳ ಅಂತರ ಇದೆ. ಬೇಗ ಪಂದ್ಯ ಮುಗಿದ್ದಿದ್ದರಿಂದ 1 ದಿನ ಹೆಚ್ಚಿಗೆ ಸಿಕ್ಕಿದೆ ಇದರಲ್ಲೇ ವಿಶ್ರಾಂತಿ ತೆಗೆದುಕೊಂಡು ಆಟಕ್ಕೆ ಮರಳಿದ್ದೇವೆ" ಎಂದರು.
ಗುರುವಾರದಿಂದ ಆಸ್ಟ್ರೇಲಿಯಾದ ವಿರುದ್ಧದ ಮಹಿಳಾ ತಂಡದ ಸರಣಿ ಆರಂಭವಾಗಲಿದೆ. ಸರಣಿಯು 1 ಟೆಸ್ಟ್ (ಡಿ 21 - 24), 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯಲಿದೆ. "ನಾವು ಆಸ್ಟ್ರೇಲಿಯಾ ವಿರುದ್ಧ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅವರ ದೌರ್ಬಲ್ಯಗಳು ನಮಗೆ ತಿಳಿದಿವೆ" ಎಂದು ಕೌರ್ ತವರಿನ ಸರಣಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹರಾಜಿನಲ್ಲಿ ಆರ್‌ಸಿಬಿಗೆ ಲಾಭವಾಗಿದ್ದೇನು?: ನಾಯಕ ಡು ಪ್ಲೆಸಿಸ್ ಹೇಳಿದ್ದಿಷ್ಟು