ಫ್ಲೋರಿಡಾ (ಅಮೆರಿಕ): ವೆಸ್ಟ್ ಇಂಡೀಸ್ನ ದಿಗ್ಗಜ ಆಟದ ಮುಂದೆ ಭಾರತ ಐಪಿಎಲ್ ಸ್ಟಾರ್ಗಳ ಆಟ ನಡೆಯಲಿಲ್ಲ. 3 ಮತ್ತು 4 ನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿ ಸರಣಿ ಸಮಬಲ ಸಾಧಿಸಿದ್ದ ಭಾರತ ಐದನೇ ಪಂದ್ಯವನ್ನು ಎಂಟು ವಿಕೆಟ್ಗಳಿಂದ ಸೋತು ತವರಿಗೆ ಮರಳ ಬೇಕಾಗಿದೆ. ಈ ಮೂಲಕ 12ನೇ ಟಿ20 ಸರಣಿ ಜಯ ಟೀಮ್ ಇಂಡಿಯಾದ ಕೈತಪ್ಪಿದೆ. ಸಿರೀಸ್ ಸೋಲಿನ ನಂತರ ಕೋಚ್ ರಾಹುಲ್ ದ್ರಾವಿಡ್ ಆಳವಾದ ಬ್ಯಾಟಿಂಗ್ ಇಲ್ಲದಿರುವುದು ಸೋಲಿಗೆ ಕಾರಣ ಎಂದಿದ್ದಾರೆ.
ಭಾರತ ಕೇವಲ ಏಳು ವಿಕೆಟ್ವರೆಗೆ ಬ್ಯಾಟಿಂಗ್ ಬಲವನ್ನು ಹೊಂದಿದೆ. ಅಕ್ಷರ್ ಪಟೇಲ್ ನಂತರ ಯಾವುದೇ ಆಟಗಾರ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಾರ. ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಚಹಾಲ್ರಿಂದ ರನ್ ಗಳಿಸುವ ಭರವಸೆ ಇಡಲಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಓವರ್ ವೇಳೆಗೆ ಭಾರತ ಏಳು ವಿಕೆಟ್ ಕಳೆದುಕೊಂಡಲ್ಲಿ ಡೆತ್ ಓವರ್ನಲ್ಲಿ ರನ್ ಗಳಿಕೆ ಕಷ್ಟವಾಗುತ್ತದೆ.
"ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇತ್ತು ಎಂದು ಕಾಣುತ್ತದೆ. ಎದುರಾಳಿ ತಂಡದಂತೆ ನಾವು ಸಹ ಆಳವಾದ ಬ್ಯಾಟಿಂಗ್ ಬಲವನ್ನು ಹೊಂದುವ ಅಗತ್ಯ ಇದೆ. ವೆಸ್ಟ್ ಇಂಡೀಸ್ ತಂಡದಲ್ಲಿ 11ನೇ ವಿಕೆಟ್ವರೆಗೂ ಬ್ಯಾಟಿಂಗ್ ಬಲ ಇದೆ. ಅಲ್ಜಾರಿ ಜೋಸೆಫ್ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಪಿಚ್ನಲ್ಲಿ ನಾವು ಇನ್ನಷ್ಟೂ ಬಿಗಿಯಾದ ಬೌಲಿಂಗ್ ದಾಳಿ ಮಾಡಬೇಕಿತ್ತು" ಎಂದು ದ್ರಾವಿಡ್ ಪಂದ್ಯದ ನಂತರ ಮಾತನಾಡಿದ್ದಾರೆ.