ಮುಂಬೈ: ಚುಟುಕು ಪಂದ್ಯದ ಹೀರೋ ಶಿಖರ್ ಧವನ್ ಅವರನ್ನು ಹೊರತುಪಡಿಸಿ ಐಸಿಸಿ ಟಿ-20 ವಿಶ್ವಕಪ್ಗಾಗಿ ಟೀಂ ಇಂಡಿಯಾ ಬುಧವಾರ 15 ಸದಸ್ಯರನ್ನೊಳಗೊಂಡ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಧವನ್ ಹೆಸರು ಕಾಣೆಯಾಗುತ್ತಿದ್ದಂತೆ ಕ್ರೀಡಾ ದಿಗ್ಗಜರು ತರಹೇವಾರಿ ಹೇಳಿಕೆಗಳನ್ನು ನೀಡಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಶಿಖರ್ ಧವನ್ ಸೀಮಿತ ಓವರ್ನ ಹೀರೋ. ಚುಟುಕು ಪಂದ್ಯದಲ್ಲಿ ಅವರಿಗೆ ಪ್ರಮುಖವಾದ ಸ್ಥಾನವಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಸ್ವಲ್ಪ ವಿಶ್ರಾಂತಿ ನೀಡುವುದು ಅಗತ್ಯತೆ ಇರುವುದದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಧವನ್ ಅವರ ಸ್ಥಾನವನ್ನು ಮತ್ತೊಬ್ಬ ಆಟಗಾರ ತುಂಬಲಿದ್ದಾನೆ. ಹೊಸಬರಿಗೆ ಅವಕಾಶ ಮಾಡಿಕೊಡುವುದೂ ಇದೆ.
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸ್ಟೈಲಿಶ್ ಓಪನರ್ ಧವನ್ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು. ನಾಯಕನಾಗಿ ತಂಡದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ. ಇತ್ತೀಚೆಗೆ ಯಾವ ಯಾವ ಚರ್ಚೆ ನಡೆಯಿತು ಎಂಬುದನ್ನು ನಾನು ಈಗ ಬಹಿರಂಗಪಡಿಸಲಾರೆ. ಆದರೆ, ಅವರೊಬ್ಬ ಮುಖ್ಯ ಆಟಗಾರ ಎಂದು ಮಾತ್ರ ಹೇಳಬಲ್ಲೆ.
ನಾವು ಬೇರೆ ಆಟಗಾರರತ್ತ ಗಮನ ನೀಡುವ ಜೊತೆಗೆ ಅವರಿಗೆ (ಧವನ್) ಸ್ವಲ್ಪ ವಿಶ್ರಾಂತಿ ಸಿಗಲಿ ಅನ್ನೋದು ನಮ್ಮ ಅಭಿಮತವಿತ್ತು. ಹಾಗಾಗಿ ಸದ್ಯಕ್ಕೆ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಇದರ ಹೊರತಾಗಿ ಅವರು ಶೀಘ್ರದಲ್ಲೇ ಮತ್ತೆ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ಭರವಸೆ ನೀಡಿದರು.
ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಧವನ್ ಬದಲಿಗೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಈ ಮೂವರಲ್ಲಿ ಯಾರಾದರೂ ಇಬ್ಬರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಜೊತೆಗೆ ಆರಂಭಿಕ ಆಟಗಾರರಾಗಿ ಬರುವ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ. ತಂಡ ಅಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.