ಮುಂಬೈ:ಟಿ.ನಟರಾಜನ್ ಒಬ್ಬ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಬಣ್ಣಿಸಿರುವ ಮಾಜಿ ಕೋಚ್ ರವಿಶಾಸ್ತ್ರಿ, ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತ ತಂಡ ಖಂಡಿತ ಎಡಗೈ ವೇಗಿಯ ಸೇವೆಯನ್ನು ಮಿಸ್ ಮಾಡಿಕೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ 2021ರ ಐತಿಹಾಸಿಕ ಟೆಸ್ಟ್ ಸರಣಿ ಜಯದ ವೇಳೆ ಬೆಳಕಿಗೆ ಬಂದಿದ್ದ ನಟರಾಜನ್, ನಂತರದ ದಿನಗಳಲ್ಲಿ ಮಂಡಿ ನೋವಿಗೆ ತುತ್ತಾಗಿ ತಂಡದಿಂದ ಹೊರಬಿದ್ದರು. ಇದೀಗ ಐಪಿಎಲ್ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.
ನಟರಾಜನ್ ಬಗ್ಗೆ ತುಂಬಾ ಖುಷಿಯಿದೆ. ನಾವು ಅವರನ್ನು ವಿಶ್ವಕಪ್ ವೇಳೆ ಮಿಸ್ ಮಾಡಿಕೊಂಡೆವು. ಅವರೇನಾದರೂ ಆ ಸಂದರ್ಭದಲ್ಲಿ ಫಿಟ್ ಆಗಿದ್ದರೆ, ಖಂಡಿತ ತಂಡದಲ್ಲಿ ಇರುತ್ತಿದ್ದರು ಎಂದು ಶಾಸ್ತ್ರಿ ಇಎಸ್ಪಿಎನ್ ಕ್ರಿಕೆಟ್ಇನ್ಫೋದ ಟಿ-20 ಟೈಮ್ ಔಟ್ನಲ್ಲಿ ಹೇಳಿದ್ದಾರೆ.
" ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡುವ ಸಂದರ್ಭದಲ್ಲಿ ಗಾಯಕ್ಕೆ ಒಳಗಾದರು. ಅವರನ್ನು ವಿಶ್ವಕಪ್ನಲ್ಲಿ ನಿಜವಾಗಿಯೂ ಮಿಸ್ ಮಾಡಿಕೊಂಡೆವು. ಅವರೊಬ್ಬ ನುರಿತ ಡೆತ್ ಬೌಲರ್, ಅತ್ಯುತ್ತಮ ಕೌಶಲ್ಯಭರಿತ ಯಾರ್ಕರ್ ಎಸೆಯಬಲ್ಲರು. ಶ್ರೇಷ್ಠ ನಿಯಂತ್ರಣ ಹೊಂದಿದ್ದಾರೆ. ಸ್ಕಿಡ್ಡಿ ಕೂಡ. ಬ್ಯಾಟರ್ ಆಲೋಚಿಸುವುದಕ್ಕಿಂತ ವೇಗವಾಗಿ ಬ್ಯಾಟ್ಗೆ ಬಡಿಯಬಲ್ಲರು" ಎಂದು ಶಾಸ್ತ್ರಿ ತಮಿಳುನಾಡು ಬೌಲರ್ಅನ್ನು ಪ್ರಶಂಸಿದ್ದಾರೆ.