ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಂಗಾಮಿ ಮುಖ್ಯಸ್ಥ ನಜಮ್ ಸೇಥಿ ಅವರು ಮಂಗಳವಾರ ಪಿಸಿಬಿಯ ಮುಂದಿನ ಅಧ್ಯಕ್ಷರಾಗುವ ರೇಸ್‌ನಿಂದ ಹಿಂದೆ ಸರಿದಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಸಮಾಧಾನ ಇರುವ ಸುಳಿವು ಸಿಕ್ಕಿದೆ. ಹೋದ ವರ್ಷ ಡಿಸೆಂಬರ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರ ಪಾತ್ರವನ್ನು ನಜಮ್ ಸೇಥಿ ವಹಿಸಿಕೊಂಡಿದ್ದರು. ಸೇಥಿ ಪಿಸಿಬಿಯಲ್ಲಿ ಮಧ್ಯಂತರ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿ ಜೂನ್ 21ರವರೆಗಿನ ಅಧಿಕಾರಾವಧಿ ಹೊಂದಿದ್ದಾರೆ.
ಸೇಥಿ ಅವರನ್ನು ಮಂಡಳಿಯ ನೂತನ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಸೇಥಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಖುದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ಪಿಸಿಬಿಯ ಮಾಜಿ ಅಧ್ಯಕ್ಷರೂ ಆಗಿರುವ ಝಕಾ ಅಶ್ರಫ್ ಅವರು ಪಿಸಿಬಿ ಮುಖ್ಯಸ್ಥರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಶ್ರಫ್ ಪಿಸಿಬಿ ಅಧ್ಯಕ್ಷರಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಆದರೆ, ಅದಕ್ಕೂ ಮೊದಲೇ ನಜಮ್ ಸೇಥಿ ಅವರು ಇನ್ನು ಮುಂದೆ ತನ್ನ ಪಾತ್ರದಲ್ಲಿ ಮುಂದುವರೆಯುವುದಿಲ್ಲ ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ದೇಶದ ಉನ್ನತ ರಾಜಕೀಯ ನಾಯಕರಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಆಸಿಫ್ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ನಡುವೆ "ವಿವಾದದ ವಸ್ತು"ವಾಗಲು ನಾನು ಬಯಸುವುದಿಲ್ಲ ಎಂದು ಸೇಥಿ ಟ್ವಿಟರ್ನಲ್ಲಿ ಬರೆದಿದ್ದಾರೆ.
ಪಿಸಿಬಿ ಅಧ್ಯಕ್ಷರಾಗಿ ಝಾಕಾ ಅಶ್ರಫ್ ಮತ್ತೆ ಅಧಿಕಾರ ವಹಿಸಿಕೊಳ್ಳುವ ಮಾರ್ಗ ಇದರಿಂದ ಸುಲಭವಾಗಲಿದೆ. ಟ್ವಿಟರ್ನಲ್ಲಿ ಸೇಥಿ "ಎಲ್ಲರಿಗೂ ಸಲಾಂ. ನಾನು ಆಸಿಫ್ ಜರ್ದಾರಿ ಮತ್ತು ಶೆಹಬಾಜ್ ಷರೀಫ್ ನಡುವಿನ ವಿವಾದದ ಎಲುಬಿನ ಮೂಳೆಯಾಗಲು ಬಯಸುವುದಿಲ್ಲ. ಇಂತಹ ಅಸ್ಥಿರತೆ ಮತ್ತು ಅನಿಶ್ಚಿತತೆಯು ಪಿಸಿಬಿಗೆ ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಪಿಸಿಬಿಯ ಅಧ್ಯಕ್ಷ ಸ್ಥಾನ ಅಭ್ಯರ್ಥಿಯಲ್ಲ. ಭಾಗವಹಿಸುವ ಎಲ್ಲರಿಗೂ ಶುಭವಾಗಲಿ" ಎಂದಿದ್ದಾರೆ.
ಈ ಬೆಳವಣಿಗೆ ಮುಂಬರುವ ಏಷ್ಯಾ ಕಪ್ ಮತ್ತು ಐಸಿಸಿ ವಿಶ್ವಕಪ್ ಮೇಲೆ ಪರಿಣಾಮ ಬೀರಬಹುದು. ಪಿಸಿಬಿ ಅಧ್ಯಕ್ಷ ಸ್ಥಾನಕ್ಕಾಗಿ ಕೇಂದ್ರದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ಪಕ್ಷಗಳು ತಮ್ಮ ನಾಮನಿರ್ದೇಶಿತರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲು ಬಯಸುತ್ತಿವೆ.
ಸೇಥಿ ಹೋರಾಟ ನಡೆಸಿ ಏಷ್ಯಾಕಪ್ನ ನಾಲ್ಕು ಪಂದ್ಯಗಳನ್ನಾದರೂ ಸರಿ ಪಾಕಿಸ್ತಾನದಲ್ಲಿ ಆಡಲೇಬೇಕು ಎಂದು ಒತ್ತಾಯಿಸಿ ಹೈಬ್ರಿಡ್ ಮಾದರಿಯನ್ನು ಎಸಿಸಿಗೆ ಒಪ್ಪಿಸಿದ್ದರು. ಅದರಂತೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜನೆಗೆ ಸಿದ್ಧತೆಗಳು ನಡೆದಿವೆ. ಅಲ್ಲದೇ ವಿಶ್ವಕಪ್ ಭಾರತಕ್ಕೆ ಪಾಕಿಸ್ತಾನ ಬರುವುದು ಬಹುತೇಕ ಖಚಿತವಾಗಿದ್ದು, ಐಸಿಸಿ ನೀಡಿದ್ದ ಕರಡು ವೇಳಾಪಟ್ಟಿಗೆ ಕೇವಲ ಎರಡು ಮೈದಾನದಲ್ಲಿ ಪಂದ್ಯಗಳನ್ನು ಆಡುವುದಿಲ್ಲ ಎಂಬ ಆಕ್ಷೇಪವನ್ನು ಮಾತ್ರ ಹೇಳಿದೆ ಎಂದಿದೆ. ಭಾರತ ಪ್ರವಾಸದ ಬಗ್ಗೆ ಯಾವುದೇ ಆಕ್ಷೇಪಣೆ ಹೇಳಿಲ್ಲ. ಈ ನಡುವೆ ಸರ್ಕಾರದ ನಿರ್ಧಾರ ಎಂಬ ಮಾತನ್ನು ಪಿಸಿಬಿ ಹೇಳಿದ್ದು ಅಧ್ಯಕ್ಷಗಿರಿಯ ಬದಲಾವಣೆಯಿಂದ ಮತ್ತೆ ಇವುಗಳು ಏರುಪೇರಾಗುತ್ತವೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಇದನ್ನೂ ಓದಿ:BWF Rankings: ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ: ಇಂಡೋನೇಷ್ಯಾ ಓಪನ್ ಗೆದ್ದ ಚಿರಾಗ್, ಸಾತ್ವಿಕ್ ಜೋಡಿಗೆ 3ನೇ ಸ್ಥಾನ!