ಮಹಾರಾಜ ಟ್ರೋಫಿ ಕ್ರಿಕೆಟ್ 2022, ಬೆಂಗಳೂರು:ಪವನ್ ದೇಶಪಾಂಡೆ ಸಮಯೋಚಿತ ಬ್ಯಾಟಿಂಗ್ (57) ಹಾಗೂ ವಿದ್ಯಾಧರ ಮಾರಕ ಬೌಲಿಂಗ್ (24ಕ್ಕೆ 4) ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ 2 ರನ್ಗಳ ರೋಚಕ ಜಯ ದಾಖಲಿಸಿದೆ.
146 ರನ್ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ಬೌಲಿಂಗ್ ದಾಳಿಗೆ ಸಿಲುಕಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ ಸೋಲು ಅನುಭವಿಸಿತು. ನಾಯಕ ಅಭಿಮನ್ಯು ಮಿಥುನ್ (27), ಶರಣ್ ಗೌಡ (31) ಹಾಗೂ ಆನಂದ್ ದೊಡ್ಡಮನಿ (10*) ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೈಸೂರು ವಾರಿಯರ್ಸ್ ಪರ ವಿದ್ಯಾಧರ ಪಾಟೀಲ್ 4, ಶ್ರೇಯಸ್ ಗೋಪಾಲ್ ಹಾಗೂ ಆದಿತ್ಯ ಗೋಯಲ್ ತಲಾ 2 ವಿಕೆಟ್ ಪಡೆದು ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೈಸೂರಿಗೆ ಆಸರೆಯಾದ ದೇಶಪಾಂಡೆ: ಕುಸಿದ ಮೈಸೂರಿಗೆ ಪವನ್ ದೇಶಪಾಂಡೆ ಆಸರೆಯಾದರು. ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್ 7 ವಿಕೆಟ್ ನಷ್ಟಕ್ಕೆ ಕೇವಲ 145 ರನ್ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್ ಅದ್ಭುತ ಯಶಸ್ಸು ಕಂಡಿತು. ನಾಯಕ ಕರುಣ್ ನಾಯರ್ ಹಾಗೂ ನಿತಿನ್ ಬಿಲ್ಲೆ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು, ಮೈಸೂರಿನ ರನ್ ಗಳಿಕೆಯ ಮೇಲೆ ತೀವ್ರ ಹೊಡೆತ ಬಿದ್ದಿತು. ನಿಹಾಲ್ ಉಳ್ಳಾಲ್ ಕೇವಲ 2 ರನ್ ಗಳಿಸಿ ಔಟಾದರು. ಆಗ ತಂಡಕ್ಕೆ ಆಶ್ರಯ ನೀಡಿದ್ದು ಪವನ್ ದೇಶಪಾಂಡೆ.
51 ಎಸೆತಗಳನ್ನೆದುರಿಸಿದ ದೇಶಪಾಂಡೆ 8 ಬೌಂಡರಿ ನೆರವಿನಿಂದ 57 ರನ್ ಗಳಿಸಿದರು. ಮಹಾರಾಜ ಟ್ರೋಫಿ ಕ್ರಿಕೆಟ್ 2022 ಪಂದ್ಯಾವಳಿಯಲ್ಲಿ ಸತತ ನಾಲ್ಕು ಅರ್ಧ ಶತಕ ಸಿಡಿಸಿದ ಕೀರ್ತಿ ಪವನ್ ದೇಶಪಾಂಡೆಗೆ ಸಲ್ಲುತ್ತದೆ. ಒಟ್ಟು ಈ ಟ್ರೋಫಿಯಲ್ಲಿ 327 ರನ್ ಗಳಿಸಿದ ಪವನ್ ದೇಶಪಾಂಡೆ ಈಗ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಶುಭಾಂಗ್ ಹೆಗ್ಡೆ (22) ಮತ್ತು ಶಿವರಾಜ್ (26) ಕೆಲ ಹೊತ್ತು ದೇಶಪಾಂಡೆಗೆ ಸಾಥ್ ನೀಡಿದರು. ಕೊನೆಯ ಕ್ಷಣದಲ್ಲಿ ಭರತ್ ಧುರಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಮಿಂಚಿನ ವೇಗದಲ್ಲಿ 18 ರನ್ ಗಳಿಸಿ ತಂಡಕ್ಕೆ ನೆರವಾದರು.