ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.
172 ರನ್‌ಗಳ ಜಯದ ಗುರಿಹೊತ್ತ ಮೈಸೂರು ವಾರಿಯರ್ಸ್ ಪರ ನಾಯಕ ಕರುಣ್ ನಾಯರ್ 47 ಹಾಗೂ ಪವನ್ ದೇಶಪಾಂಡೆ ಅವರ ಆಕರ್ಷಕ ಅರ್ಧ ಶತಕದ (53*) ನೆರವಿನಿಂದ ಇನ್ನೂ 11 ಎಸೆತ ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪವನ್ ದೇಶಪಾಂಡೆ ಹಾಗೂ ಕರುಣ್ ನಾಯರ್ 88 ರನ್ ಜೊತೆಯಾಟವಾಡಿ ಜಯದ ಹಾದಿ ಸುಗಮಗೊಳಿಸಿದರು.
ಮಂಗಳೂರು ತಂಡದ ಪರ ನಿಕಿನ್ ಜೋಸ್ (55) ಮತ್ತು ಅಭಿನವ್ ಮನೋಹರ್ (68) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಮಂಗಳೂರು ಯುನೈಟೆಡ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ 171 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಟಾಸ್ ಗೆದ್ದ ಮೈಸೂರು ವಾರಿಯರ್ಸ್: ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಯುನೈಟೆಡ್‌ನ ಆರಂಭಿಕ ಆಟಗಾರ ಮೆಕ್‌ನಿಲ್ ನೊರೋನ್ಹಾ ಅವರು ಪ್ರತೀಕ್ ಜೈನ್ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಮಂಗಳೂರಿಗೆ ಆಘಾತ ನೀಡಿದರು. ಹಿಂದಿನ ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ನಾಯಕ ಸಮರ್ಥ್ 22 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ, ಮತ್ತೆ ಪ್ರತೀಕ್ ಜೈನ್ ಅವರು ಸಮರ್ಥ್ ಅವರ 40 ರನ್‌ಗಳ ಜೊತೆಯಾಟವನ್ನು ಮುರಿಯುವಲ್ಲಿ ಸಫಲರಾದರು.
ಬಳಿಕ ಆಗಮಿಸಿದ ನಿಕಿನ್ ಜೋಸ್ ಅವರು 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ಕುಸಿದ ತಂಡಕ್ಕೆ ನೆರವಾದರು. 5 ರನ್ ಗಳಿಸಿ ಆಡುತ್ತಿದ್ದ ಅನೀಶ್ವರ್ ರನೌಟ್ ಆದರು. ಮಿಂಚಿನ ಆಟ ಮುಂದುವರೆಸಿದ್ದ ನಿಕಿನ್ ಜೋಸ್ ಅವರು ಆದಿತ್ಯ ಗೋಯಲ್ ಅವರಿಗೆ ವಿಕೆಟ್ ಒಪ್ಪಿಸಿ ಪೆವೆಲಿಯನ್ ತೆರಳಿದರು.