ಬೆಂಗಳೂರು :ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಎಂಟು ವಿಕೆಟ್ಗಳ ಜಯ ಸಾಧಿಸಿದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಜಗದೀಶ ಸುಚಿತ್ (28ಕ್ಕೆ 3 ವಿಕೆಟ್) ಹಾಗೂ ರವಿಕುಮಾರ್ ಸಮರ್ಥ್ (62*) ಅಜೇಯ ಅರ್ಧಶತಕದ ಬಲದಿಂದ ಮೈಸೂರು ತಂಡ 154 ರನ್ಗಳ ಗುರಿಯನ್ನು ಎರಡು ಓವರ್ಗಳು ಬಾಕಿ ಇರುವಂತೆಯೇ ತಲುಪಿ, ಗೆಲುವಿನ ನಗೆ ಬೀರಿತು.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮೈಸೂರು ಪರ ದಾಳಿಗಿಳಿದ ಅನುಭವಿ ಸ್ಪಿನ್ನರ್ ಜಗದೀಶ ಸುಚಿತ್ ಮಿಸ್ಟಿಕ್ಸ್ ಆರಂಭಿಕರಾದ ಆದರ್ಶ್ ಪ್ರಜ್ವಲ್ (11) ಮತ್ತು ಎಲ್.ಆರ್.ಚೇತನ್ (34) ವಿಕೆಟ್ ಪಡೆದರು. ಆರ್.ಸ್ಮರನ್ (3) ಏಳನೇ ಓವರ್ನಲ್ಲಿ ಕುಶಾಲ್ ವಾಧ್ವಾನಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
ಬಳಿಕ ಮತ್ತೊಮ್ಮೆ ದಾಳಿಗಿಳಿದ ಜಗದೀಶ್ ಸುಚಿತ್, 18 ಎಸೆತಗಳಲ್ಲಿ 25 ರನ್ ಗಳಿಸಿದ್ದ ಮ್ಯಾಕ್ನೈಲ್ ನೊರೊನ್ಹಾರನ್ನ ಔಟ್ ಮಾಡಿದರು. ಕೊಂಚ ಭರವಸೆ ಮೂಡಿಸಿದ್ದ ಅಮಿತ್ ವರ್ಮಾ (9) ಮತ್ತು ಕೆವಿ ಅನೀಶ್ (19) ಕ್ರಮವಾಗಿ 15 ಮತ್ತು 16ನೇ ಓವರ್ಗಳಲ್ಲಿ ವಿಕೆಟ್ ಕೈಚೆಲ್ಲಿದರು. ಶ್ರೀನಿವಾಸ್ ಶರತ್ (26) ಮತ್ತು ಡಿ ಅವಿನಾಶ್ (19*) ಏಳನೇ ವಿಕೆಟ್ಗೆ 45 ರನ್ ಸೇರಿಸುವ ಮೂಲಕ ಗುಲ್ಬರ್ಗಾ ಮಿಸ್ಟಿಕ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಮೈಸೂರು ಪರ ಜಗದೀಶ್ ಸುಚಿತ್ (28/3) ಹಾಗೂ ಕುಶಾಲ್ ವಾಧ್ವಾನಿ (17/2) ಮಿಂಚಿನ ಬೌಲಿಂಗ್ ನಡೆಸಿದರು.