ನವದೆಹಲಿ: ಐಪಿಎಲ್ ಹರಾಜಿನಲ್ಲಿ 2 ದಿನಗಳ ಕಾಲ ಕೋಟಿ ಕೋಟಿ ರೂ.ಗಳ ಡೀಲ್ಗಳನ್ನು ನೋಡಿರುವುದರಿಂದ ನಮಗೆ 20 ಲಕ್ಷದ ಒಪ್ಪಂದ ದೊಡ್ಡ ವಿಷಯ ಅನ್ನಿಸುವುದಿಲ್ಲ. ಆದರೆ ಟೆನ್ನಿಸ್ ಬಾಲ್ ಚತುರ ರಮೇಶ್ ಕುಮಾರ್ಗೆ ತಮ್ಮ ತಂದೆ ಚಮ್ಮಾರ ವೃತ್ತಿ ಮಾಡುವುದನ್ನ ಮತ್ತು ತಾಯಿ ಪಂಜಾಬ್ನ ಫಜಿಲ್ಕಾ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಿ ಬಳೆ ಮಾರಾಟ ಮಾಡುವುದನ್ನು ನಿಲ್ಲಿಸುವುದಕ್ಕೆ ತಾವೂ ಪಡೆದ ಅಷ್ಟೇ ಹಣ ಸಾಕು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇನ್ನೂ ಕ್ಲಬ್ ಮಟ್ಟದ ಅಥವಾ ಯಾವುದೇ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲದ ರಮೇಶ್ ಕುಮಾರ್ ಎಡಗೈ ಸ್ಪಿನ್ನರ್ ಆಗಿದ್ದು, ಅವರನ್ನು 'ಜಲಾಲಾಬಾದ್ ನರೈನ್' ಎಂದು ಅವರ ಹಳ್ಳಿಯ ಸುತ್ತಾ ಮುತ್ತ ಜನ ಕರೆಯುತ್ತಾರೆ. ಕೇವಲ 10 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಅವರು ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್ ಮಾಡಿ ಈಗಾಗಲೇ ಯ್ಯೂಟ್ಯೂಬ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡ ನಂತರ ಅವರ ಕಥೆ ಹೆಚ್ಚು ಜನರನ್ನು ತಲುಪಿದೆ.
ಇದನ್ನೂ ಓದಿ:ನಾನು ಎಂಎಸ್ ಧೋನಿಯಂತೆ ಮ್ಯಾಚ್ ಫಿನಿಷ್ ಮಾಡಲು ಇಷ್ಟಪಡುತ್ತೇನೆ: ಸ್ಟೋಯ್ನಿಸ್
"ನನ್ನ ಅಪ್ಪ ಅಮ್ಮ ಇನ್ನು ಮುಂದೆ ಕೆಲಸ ಮಾಡದಿರಲು ಅಂತಿಮವಾಗಿ ಒಪ್ಪಿಕೊಂಡಿದ್ದಾರೆ. ಅವರು ಈ ಕೆಲಸ ಮಾಡಬೇಕೆಂದು ನಾನು ಎಂದಿಗೂ ಬಯಸಲಿಲ್ಲ, ಆದರೆ, ಹೊಟ್ಟೆ ಪಾಡಿಗಾಗಿ ಅನಿವಾರ್ಯವಾಗಿ ಮಾಡಬೇಕಾಗಿತ್ತು" ಎಂದು ರಮೇಶ್ ಪಿಟಿಐಗೆ ತಿಳಿಸಿದ್ದಾರೆ.
ಕೆಕೆಆರ್ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ ನನ್ನ ಜೀವನ ಬದಲಾಗುವುದಿಲ್ಲ, ನಾನು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬದಲಾಗುತ್ತದೆ. ನಾನು ಆ ದಾರಿ ಕಾಯುತ್ತಿದ್ದೇನೆ, ಅಂತಿಮವಾಗಿ ನನಗೆ ಅಗತ್ಯವಾದ ವೇದಿಕೆ ಸಿಕ್ಕಿದೆ ಎಂದು ಎಡಗೈ ಸ್ಪಿನ್ನರ್ ಹೇಳಿಕೊಂಡಿದ್ದಾರೆ. ತಾವೂ ಐಪಿಎಲ್ ಒಪ್ಪಂದ ಪಡೆದುಕೊಂಡಾಗಿನಿಂದಲೂ ತಮ್ಮ ಮೊಬೈಲ್ ಸತತವಾಗಿ ರಿಂಗ್ ಆಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
7 ವರ್ಷಗಳ ಕಾಲ ಭಾರತಾದ್ಯಂತ ಟೆನಿಸ್ ಟೂರ್ನಿಮೆಂಟ್ಗಳಲ್ಲಿ ಆಡುತ್ತಿದ್ದ ರಮೇಶ್ ಕಳೆದ ವರ್ಷವಷ್ಟೇ ಲೆದರ್ ಬಾಲ್ ರುಚಿ ಕಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಜಿಲ್ಲಾ ಮಟ್ಟದ ಟೂರ್ನಮೆಂಟ್ನಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದರಿಂದ ಅವರನ್ನು ರಣಜಿ ಕ್ಯಾಂಪ್ಗೆ ಕರೆಸಿಕೊಳ್ಳಲಾಗಿತ್ತು.
ಗುರ್ಕಿರಾತ್ ಮನ್ ನೆರವು:ಸ್ಥಳೀಯ ಟೂರ್ನಮೆಂಟ್ಗಳಲ್ಲಿ ಗಮನ ಸೆಳೆದಿದ್ದ ರಮೇಶ್, ಒಮ್ಮೆ ಪಂಜಾಬ್ ತಂಡದ ಹಿರಿಯ ಆಲ್ರೌಂಡರ್ ಗುರ್ಕಿರಾತ್ ಮನ್ರನ್ನು ಭೇಟಿ ಮಾಡಿ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ನಂತರ ಗುರ್ಕಿರಾರ್, ರಮೇಶ್ ಬೌಲಿಂಗ್ ಮಾಡುವ ಕೆಲವು ವಿಡಿಯೋಗಳನ್ನು ಕೆಕೆಆರ್ ತಂಡದ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಅವರಿಗೆ ಕಳುಹಿಸಿಕೊಟ್ಟಿದ್ದರು.