ನವದೆಹಲಿ: ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನನ್ನ ಮಂದಗತಿಯ ಬ್ಯಾಟಿಂಗ್ನಿಂದಲೇ ಹೈದರಾಬಾದ್ ತಂಡಕ್ಕೆ ಸೋಲುಂಟಾಯಿತು. ಇದರ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ ಎಂದು ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು. ವಾರ್ನರ್ 55 ಎಸೆತಗಳನ್ನಾಡಿ ಕೇವಲ 57 ರನ್ ಗಳಿಸಿದ್ದರು. ಮನೀಶ್ ಪಾಂಡೆ 61 ಮತ್ತು ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಆದರೆ ಸಿಎಸ್ಕೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪಂದ್ಯದ ನಂತರ ಡೇವಿಡ್ ವಾರ್ನರ್ ಮಾತನಾಡಿ, "ನಾನು ಬ್ಯಾಟಿಂಗ್ ಮಾಡಿದ ರೀತಿಯಿಂದಾಗಿ ಈ ಸೋಲಿನ ಸಂಪೂರ್ಣ ಹೊಣೆ ಹೊರುತ್ತೇನೆ. ನಿಜಕ್ಕೂ ಇದು ಬಹಳ ನಿಧಾನತಿಯ ಬ್ಯಾಟಿಂಗ್ ಆಗಿತ್ತು. ನಾನು ಹೊಡೆದ ಶಾಟ್ಗಳೆಲ್ಲಾ ಫೀಲ್ಡರ್ ಇದ್ದ ಜಾಗಕ್ಕೆ ಸೇರುತ್ತಿದ್ದವು. ಇದರಿಂದ ನನಗೆ ತುಂಬಾ ನಿರಾಶೆಯಾಗಿದೆ. ಮನೀಶ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಕೊನೆಯಲ್ಲಿ ಕೇನ್ ಬಿರುಸಿನ ಆಟವಾಡಿ ತಂಡಕ್ಕೆ ಗೌರವಯುತ ಮೊತ್ತ ತಂದುಕೊಟ್ಟರು. ಆದರೆ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಗದಿದ್ದಕ್ಕೆ ನಾನೇ ಕಾರಣ. ಇದರ ಹೊಣೆ ನಾನೇ ಹೊರುತ್ತೇನೆ" ಎಂದು ಹೇಳಿದ್ದಾರೆ.