ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಸ್ಪರ್ಧೆಯಿಂದ ಬಾಂಗ್ಲಾದೇಶ ಈಗಾಗಲೇ ಎರಡು ಸೋಲು ಕಂಡು ಹೊರಬಿದ್ದಿದೆ. ಆದರೆ, 15 ರಂದು ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ಭಾರತದ ವಿರುದ್ಧ ಔಪಚಾರಿಕ ಪಂದ್ಯವನ್ನಾದರೂ ಆಡಬೇಕಿದೆ. ಈ ಪಂದ್ಯಕ್ಕೆ ಅನುಭವಿ ಆಟಗಾರ ವಿಕೆಟ್ ಕೀಪಿಂಗ್ ಬ್ಯಾಟರ್ ಮುಶ್ಫಿಕರ್ ರಹೀಮ್ ತಂಡದಲ್ಲಿರುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೂಪರ್ ಫೋರ್ಗೆ ಪ್ರವೇಶಿಸಿದ ಬಾಂಗ್ಲಾವನ್ನು ಪಾಕಿಸ್ತಾನ ತಂಡ ತವರು ಮೈದಾನದಲ್ಲಿ 193 ರನ್ಗೆ ಕಟ್ಟಿಹಾಕಿದರು. ಪಾಕಿಸ್ತಾನದ ವೇಗದ ದಾಳಿಗೆ ಬಾಂಗ್ಲಾ ಬ್ಯಾಟರ್ಗಳು ತತ್ತರಿಸಿದ್ದರು. ಶ್ರೀಲಂಕಾ ನೀಡಿದ್ದ 257 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 236ಕ್ಕೆ ಸರ್ವಪತನ ಕಂಡು 21 ರನ್ಗಳ ಸೋಲು ಕಂಡಿತ್ತು. ಈ ಎರಡು ಸೋಲಿನಿಂದಾಗಿ ಏಷ್ಯಾಕಪ್ ಫೈನಲ್ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಬಾಂಗ್ಲಾದೇಶ ಕಳೆದುಕೊಂಡಿದೆ.
ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ 357 ರನ್ಗಳ ಗುರಿ ನೀಡಿದ ಭಾರತ, ಪಾಕ್ ಅನ್ನು 128ಕ್ಕೆ ಆಲ್ಔಟ್ ಮಾಡಿ ಪಂದ್ಯವನ್ನು ಗೆದ್ದಿತು. ನಿನ್ನೆ (ಮಂಗಳವಾರ) ಶ್ರೀಲಂಕಾ ವಿರುದ್ಧ 213 ರನ್ ಸಾಧಾರಣ ಗುರಿಯನ್ನು ನೀಡಿದರೂ, ಬಲಿಷ್ಠ ಬೌಲಿಂಗ್ ಪ್ರದರ್ಶಿಸಿ ಲಂಕಾವನ್ನು 172ಕ್ಕೆ ಆಲ್ಔಟ್ ಮಾಡಿ 41 ರನ್ಗಳ ಗೆಲುವು ಸಾಧಿಸಿತು. ಇದರಿಂದ ಭಾರತ ನೇರ ಫೈನಲ್ಗೆ ಪ್ರವೇಶ ಪಡೆದಿದೆ. ನಾಳೆ ಲಂಕಾ - ಪಾಕ್ ಪಂದ್ಯದ ಫಲಿತಾಂಶದಿಂದ ಭಾರತಕ್ಕೆ ಫೈನಲ್ ಎದುರಾಳಿ ಯಾರು ಎಂದು ತಿಳಿಯಲಿದೆ.