ಮುಂಬೈ: ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಮುಂಬೈ ಸತತ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಂಧಾನ ನೇತೃತ್ವದ ಆರ್‌ಸಿಬಿ 18.4 ಓವರ್‌ಗಳಲ್ಲಿ 155 ರನ್ ಕಲೆ ಹಾಕಲು ಸಾಧ್ಯವಾಯಿತು. ಆರಂಭಿಕರಾಗಿ ಕ್ರೀಸಿಗಳಿದ ಸ್ಮೃತಿ ಮಂಧಾನ (23) ಮತ್ತು ಸೋಫಿ ಡಿವೈನ್ (16) ಮೊದಲ ವಿಕೆಟ್‌ಗೆ 39 ರನ್‌ಗಳನ್ನು ಸೇರಿಸಿದರು. ಸಯ್ಕಾ ಐಸಾಕ್ ಅವರ 5ನೇ ಓವರ್‌ನಲ್ಲಿ ತಂಡದ ಬ್ಯಾಟರ್ಗಳಾದ ಡಿವೈನ್ ಮತ್ತು ದಿಶಾ ಕಸತ್ (0) ವಿಕೆಟ್ ಉರುಳಿಸಿ ಪೆವಿಲಿಯನ್ ಸೇರಿಸಿದರು. ಆರನೇ ಓವರ್‌ನ ಎರಡನೇ ಎಸೆತದಲ್ಲಿ ಮಂಧಾನ ಅವರು ಹೇಯ್ಲಿ ಮ್ಯಾಥ್ಯೂಸ್ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನ ಮೂರನೇ ಎಸೆತದಲ್ಲಿ ಹೀದರ್ ನೈಟ್ (0) ಅವರನ್ನೂ ಮ್ಯಾಥ್ಯೂಸ್ ತಮ್ಮ ಬಲೆಗೆ ಬೀಳಿಸಿದರು. ಒಂಬತ್ತನೇ ಓವರ್‌ನಲ್ಲಿ 13 ರನ್‌ಗಳನ್ನು ಕಲೆ ಹಾಕಿದ ಎಲ್ಲಿಸ್ ಪೆರ್ರಿ ರನ್ ಔಟ್ ಆಗುವ ಮೂಲಕ ಎರಡನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.
ತಂಡದ ಸ್ಕೋರ್ 71 ಆಗುವಷ್ಟರಲ್ಲೇ ಪ್ರಮುಖ ಅಗ್ರ 5 ಆಟಗಾರ್ತಿಯರು ಪೆವಿಲಿಯನ್ ಹಾದಿ ಹಿಡಿದಿದ್ದರು. ರಿಚಾ ಘೋಷ್ (28) ಮತ್ತು ಕನಿಕಾ ಅಹುಜಾ (22) ಆರನೇ ವಿಕೆಟ್‌ಗೆ ಜತೆಯಾಟವಾಡಿ 34 ರನ್‌ಗಳನ್ನು ತಂಡಕ್ಕೆ ನೀಡಿದರು. ಆ ಬಳಿಕ 13ನೇ ಓವರ್‌ನಲ್ಲಿ ಕನಿಕಾ ಪೂಜಾ ವಸ್ತ್ರಾಕರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರೆ, 14ನೇ ಓವರ್‌ನಲ್ಲಿ ರಿಚಾ, ಹೇಯ್ಲಿ ಮ್ಯಾಥ್ಯೂಸ್ಗೆ ಬಲಿಯಾದರು. ನಂತರ ಶ್ರೇಯಾಂಕಾ ಪಾಟೀಲ್ (22) ಮತ್ತು ಮೇಗನ್ ಶುಟ್ (20) ರನ್ ಕೊಡುಗೆ ನೀಡುವ ಮೂಲಕ ತಂಡದ ಒಟ್ಟು ಮೊತ್ತ 150 ತಲುಪಿತು. ಮುಂಬೈ ಪರ ಹೇಯ್ಲಿ ಮ್ಯಾಥ್ಯೂಸ್ 3, ಸೈಕಾ ಐಸಾಕ್ ಮತ್ತು ಅಮೆಲಿಯಾ ಕೆರ್ ತಲಾ ಎರಡು ವಿಕೆಟ್, ಬ್ರಂಟ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದು ವಿಕೆಟ್ ಪಡೆದರು.
ಆರ್‌ಸಿಬಿ ನೀಡಿದ 156 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಕೇವಲ 14.2 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಹೇಯ್ಲಿ ಮ್ಯಾಥ್ಯೂಸ್ 38 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್ ಸಮೇತ ಅಜೇಯ 77 ರನ್ ಗಳಿಸಿದರು. ಮತ್ತೊಂದು ಬದಿಯಲ್ಲಿ ನಟಾಲಿ ಸ್ಕೈವರ್ 29 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಅಜೇಯ 55 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಕಾಣಿಕೆ ಕೊಟ್ಟರು. ಹೇಯ್ಲಿ ಮ್ಯಾಥ್ಯೂಸ್ ಮತ್ತು ನಟಾಲಿ ಸ್ಕೈವರ್ ಎರಡನೇ ವಿಕೆಟ್‌ಗೆ ಮುರಿಯದ 114 ರನ್ ಜೊತೆಯಾಟ ಗಮನ ಸೆಳೆಯಿತು. ಆರಂಭಿಕ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ 19 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 23 ರನ್ ಪೇರಿಸಿ ಪ್ರೀತಿ ಬೋಸ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಇದನ್ನೂ ಓದಿ:ಬ್ಯಾಟ್‌ನಲ್ಲಿ ಧೋನಿ ಹೆಸರು ಬರೆದು ಅರ್ಧಶತಕ ಸಿಡಿಸಿ ಯುಪಿ ಗೆಲುವಿಗೆ ಕಾಣಿಕೆ ನೀಡಿದ ಕಿರಣ್!