ಮುಂಬೈ: ಪ್ರಥಮ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನ ನಾಕೌಟ್ ಹಂತಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗುತ್ತಿದೆ. ಇಂದು ಸೋತವರು ಫೈನಲ್ ಪಂದ್ಯ ಕಳೆದು ಕೊಂಡರೆ, ಗೆದ್ದವರು ಡೆಲ್ಲಿಯನ್ನು 26ರಂದು ಎದುರಿಸಬೇಕಿದೆ.
ಲೀಗ್ ಹಂತದಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕ ಮತ್ತು ಉತ್ತಮ ರನ್ ರೇಟ್ನಿಂದ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ನೇರ ಫೈನಲ್ನ ಮೆಟ್ಟಿಲೇರಿದೆ. ಭಾನುವಾರ ನಡೆಯುವ ಫೈನಲ್ಸ್ನಲ್ಲಿ ತನ್ನ ಎದುರಾಳಿ ಯಾರೆಂದು ಡಿಸಿ ಎದುರು ನೋಡುತ್ತಿದೆ. ಮಾರ್ಚ್ 4 ರಂದು ಆರಂಭವಾದ ಲೀಗ್ಗೆ ಇದೇ 26ಕ್ಕೆ ತೆರೆ ಬೀಳಲಿದೆ. ಉದ್ಘಾಟನಾ ಪಂದ್ಯ ಆಡಿದ ಮುಂಬೈಗೆ ಫೈನಲ್ ಪ್ರವೇಶ ಸಿಗಲಿದೆಯೇ ಎಂಬುದು ಇಂದಿನ ಫಲಿತಾಂಶದ ನಂತರ ತಿಳಿಯಲಿದೆ.
2 ಪಂದ್ಯ ಸೋತು ಅಗ್ರಸ್ಥಾನ ಕಳೆದುಕೊಂಡ ಎಂಐ: ಮುಂಬೈ ಇಂಡಿಯನ್ಸ್ ಈ ಋತುವಿನ ಆರಂಭದ ಪಂದ್ಯದಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಸತತ ಐದು ಪಂದ್ಯದಲ್ಲಿ ಸೋಲು ಕಾಣದೇ ಗೆಲುವಿನ ನಾಗಾಲೋಟ ಮುಂದುವರಿಸಿತ್ತು. ಈ ಮೂಲಕ ಪ್ಲೇ-ಆಫ್ಗೆ ಕ್ವಾಲಿಫೈ ಆಗಿತ್ತು. ಆದರೆ 6 ಮತ್ತು 7ನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಭಾರಿ ಹಿನ್ನಡೆ ಅನುಭವಿಸಿ ಸೋಲು ಕಂಡಿದೆ. ಈ ಎರಡು ಅಪಜಯ ಅಗ್ರಸ್ಥಾನ ಕಳೆದುಕೊಳ್ಳಲು ಕಾರಣವಾಯಿತು.
ಮುಂಬೈ ಇಂಡಿಯನ್ಸ್ನ ಕೊನೆಯ ಪಂದ್ಯದಲ್ಲಿ (8ನೇ ಮ್ಯಾಚ್) ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಮಣಿಸಿ ಮತ್ತೆ ಅಗ್ರಸ್ಥಾನ ಪಡೆದರೂ, ಡೆಲ್ಲಿ ಯುಪಿ ವಾರಿಯರ್ಸ್ ಅನ್ನು ಸೋಲಿಸಿದ್ದರಿಂದ ನೇರ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿತು. ಆರಂಭದಲ್ಲಿ ಆಡುತ್ತಿದ್ದ ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನೇಟ್ ಸ್ಕೈವರ್ ಬ್ರಂಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ವೈಫಲ್ಯ ಎರಡು ಪಂದ್ಯದ ಸೋಲಿಗೆ ಕಾರಣವಾಗಿತ್ತು. ಮಹತ್ವದ ಪಂದ್ಯದಲ್ಲಿ ಮತ್ತೆ ಈ ನಾಲ್ವರು ಘರ್ಜಿಸುತ್ತಾರಾ ಎಂಬುದು ಪ್ರಶ್ನೆ.
ಯುಪಿ ಸಮತೋಲಿತ ಪ್ರದರ್ಶನ: ಯುಪಿ ವಾರಿಯರ್ಸ್ ಲೀಗ್ ಉದ್ದಕ್ಕೂ ಸೋಲು-ಗೆಲುವಿನ ಸಿಹಿ-ಕಹಿ ಕಂಡು ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿತು. ಅಲಿಸ್ಸಾ ಹೀಲಿ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್ ತಂಡದ ಬಲವಾಗಿದ್ದಾರೆ. ಸೋಫಿ ಎಕ್ಲೆಸ್ಟೋನ್ ಆಲ್ರೌಂಡರ್ ಪ್ರದರ್ಶನ ತಂಡಕ್ಕೆ ಗೆಲುವಿಗೆ ಕಾರಣವಾಗಿತ್ತು.