ಮುಂಬೈ(ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ವೇಳಾಪಟ್ಟಿ ದಿನದಿಂದ ದಿನಕ್ಕೆ ಬಿಗುವಾಗುತ್ತಿದೆ. ಹೀಗಾಗಿ, ಆಟಗಾರರು ಕುಟುಂಬದಿಂದ ಹತ್ತಾರು ತಿಂಗಳ ಕಾಲ ದೂರವಿರುವಂತಹ ಪರಿಸ್ಥಿತಿ ಇದೆ. ಕೋವಿಡ್ ಹಾಗೂ ಬಯೋಬಬಲ್ ಯುಗದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಆಟಗಾರ ಕುಮಾರ್ ಕಾರ್ತಿಕೇಯ ಸುಮಾರು 9 ವರ್ಷಗಳ ಬಳಿಕ ಇದೀಗ ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಕಾರ್ತಿಕೇಯ ಪ್ರತಿಕ್ರಿಯಿಸಿ, "9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಹಾಗೂ ಅಮ್ಮನನ್ನು ಭೇಟಿಯಾದೆ. ಈ ವೇಳೆ ನನಗಾಗುತ್ತಿರುವ ಸಂತಸದಲ್ಲಿ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ" ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.
ಕುಮಾರ್ ಕಾರ್ತಿಕೇಯ ಈ ಚಿತ್ರವನ್ನು ಪೋಸ್ಟ್ ಮಾಡ್ತಿದ್ದಂತೆ 18,000 ಲೈಕ್ಸ್ ಸಿಕ್ಕಿದ್ದು 900ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. 2022ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಕಾರ್ತಿಕೇಯ ತಾವು ಆಡಿರುವ 4 ಪಂದ್ಯಗಳಿಂದ 5 ವಿಕೆಟ್ ಪಡೆದುಕೊಂಡಿದ್ದರು. ಈ ಪ್ಲೇಯರ್ ಇದೀಗ ಮಧ್ಯಪ್ರದೇಶ ರಣಜಿ ಟ್ರೋಫಿ ತಂಡದಲ್ಲಿ ಆಡುತ್ತಿದ್ದು, ತಂಡ ಪ್ರಸಕ್ತ ಋತುವಿನಲ್ಲಿ ಚಾಂಪಿಯನ್ ಆಗಿದೆ. ಕಾರ್ತಿಕೇಯ 11 ಪಂದ್ಯಗಳಿಂದ 32 ವಿಕೆಟ್ ಸಾಧನೆ ಮಾಡಿದ್ದಾರೆ.