ಆಂಟಿಗುವಾ:ಐಪಿಎಲ್ ಕಿರು ಹರಾಜಿಗೂ ಮೊದಲು ಮುಂಬೈ ಇಂಡಿಯನ್ಸ್ ತಂಡ ಕಿರಾನ್ ಪೊಲ್ಲಾರ್ಡ್ರನ್ನು ಕೈಬಿಡಲು ಉದ್ದೇಶಿಸಿದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ಆಟಗಾರ ಭಾರತದ ಟೂರ್ನಿಗೆ ನಿವೃತ್ತಿ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಾನು ಆಡಲು ಬಯಸುವುದಿಲ್ಲ. ಹೀಗಾಗಿ ಟೂರ್ನಿಗೆ ಗುಡ್ಬೈ ಹೇಳುತ್ತಿದ್ದೇನೆ ಎಂದು ಪೊಲ್ಲಾರ್ಡ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ಸುದೀರ್ಘ ಬರವಣಿಗೆಯ ಪೋಸ್ಟ್ ಮಾಡಿರುವ ದೈತ್ಯ ಬ್ಯಾಟ್ಸಮನ್, ಒಮ್ಮೆ ಮುಂಬೈ ಪರ ಆಡಿದ ಮೇಲೆ ಕೊನೆವರೆಗೂ ಅದೇ ಆಗಿರುತ್ತದೆ,. ಅದರ ವಿರುದ್ಧ ಆಡಲು ನಾನು ಬಯಸುವುದಿಲ್ಲ. ತಂಡದಲ್ಲಿ ಬದಲಾವಣೆ ಅಗತ್ಯವಿದೆ. ಅದನ್ನು ಮನಗಂಡಿದ್ದೇನೆ. ಆದರೆ, ತಂಡದ ವಿರುದ್ಧ ನಾನು ಕಣಕ್ಕಿಳಿಯುವುದಿಲ್ಲ. ಅತ್ಯಂತ ದೊಡ್ಡ ಫ್ರಾಂಚೈಸಿ ಮತ್ತು ತಂಡದ ಭಾಗವಾಗಿದ್ದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ.
2010 ರಿಂದ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿರುವ ಪೊಲ್ಲಾರ್ಡ್, ಅತ್ಯಂತ ಪ್ರಭಾವಿ ಆಟಗಾರರಾಗಿದ್ದಾರೆ. ಆಲ್ರೌಂಡ್ ಪ್ರದರ್ಶನದಿಂದ ಅನೇಕ ಪಂದ್ಯಗಳನ್ನು ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಈವರೆಗೂ ಐಪಿಎಲ್ನಲ್ಲಿ 189 ಪಂದ್ಯಗಳಲ್ಲಿ ಆಡಿರುವ ಪೊಲ್ಲಾರ್ಡ್ 28.67 ರ ಸರಾಸರಿಯಲ್ಲಿ 3,412 ರನ್ ಗಳಿಸಿದ್ದಾರೆ. 16 ಅರ್ಧ ಶತಕಗಳು ಬ್ಯಾಟ್ನಿಂದ ಹರಿದು ಬಂದಿವೆ. 69 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.