ಮುಂಬೈ :2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸತತ 6ನೇ ಸೋಲು ಕಂಡಿದೆ. ಟಾಸ್ ಗೆದ್ದರೂ ಕೂಡ ತಂಡದ ಅದೃಷ್ಟ ಮಾತ್ರ ಬದಲಾಗುತ್ತಿಲ್ಲ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್, ಈ ಬಾರಿ ದಯನೀಯ ವೈಫಲ್ಯ ಅನುಭವಿಸುತ್ತಿದೆ.
ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಬೇರೆ ಯಾವ ಬೌಲರ್ಗಳು ಪರಿಣಾಮಕಾರಿಯಾಗಿಲ್ಲ. ಸ್ಪಿನ್ ಬೌಲರ್ಗಳು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಮೇಲಾಗಿ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕೀರನ್ ಪೊಲಾರ್ಡ್ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲು ವಿಫಲರಾಗಿದ್ದಾರೆ.
ಒಂದು ತಂಡವಾಗಿ ಸಂಪೂರ್ಣ ವೈಫಲ್ಯ ಅನುಭವಿಸಿರುವ ಮುಂಬೈ ತಂಡ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು ಕಂಡ 3ನೇ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾಗಿದೆ. 2013ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೂಡ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದವು.
ಸ್ವತಃ ಮುಂಬೈ ಇಂಡಿಯನ್ಸ್ 2008ರಲ್ಲಿ ಸತತ 4, 2014ರಲ್ಲಿ ಸತತ 5, 2019ರಲ್ಲಿ ಮೊದಲ 6 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಪ್ರಸ್ತುತ ಸತತ 6 ಸೋಲು ಕಂಡಿದೆ. ಇದರಲ್ಲಿ ಗಮನಿಸಬೇಕಾದಂತಹ ಪ್ರಮುಖ ವಿಷಯವೆಂದರೆ ಮುಂಬೈ ತಂಡ ಪ್ರತಿ ಮೆಗಾ ಹರಾಜಿನ ನಂತರ ನಡೆದ ಆವೃತ್ತಿಯಲ್ಲಿ ವೈಫಲ್ಯ ಕಂಡಿದೆ. ವಿಶೇಷವೆಂದರೆ ನಂತರದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. 2015, 2019ರಲ್ಲಿ ಚಾಂಪಿಯನ್ ಕೂಡ ಆಗಿದೆ.
ಇದನ್ನೂ ಓದಿ:100ನೇ ಐಪಿಎಲ್ ಪಂದ್ಯದಲ್ಲಿ ರಾಹುಲ್ 3ನೇ ಶತಕ.. ಹಲವು ವಿಶೇಷತೆಗೆ ಒಳಗಾಯ್ತು ಕನ್ನಡಿಗನ ಸೆಂಚುರಿ..