ಮುಂಬೈ: 2022ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಮಂಗಳವಾರ ಬಹಿರಂಗಗೊಳಿಸಿವೆ. ಇದರಲ್ಲಿ ಕೆಲವೊಂದು ಆಶ್ಚರ್ಯಕರ ರಿಟೈನ್ ಕಂಡು ಬಂದರೆ, ಇನ್ನೂ ಕೆಲವು ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಬಾರಿ ರೋಹಿತ್, ಹಾರ್ದಿಕ್ ಮತ್ತು ಬುಮ್ರಾ ಅವರನ್ನು ಖರೀದಿಸಿತ್ತು. ಆದರೆ, ಈ ಬಾರಿ ಹಾರ್ದಿಕ್ರನ್ನು ಬಿಟ್ಟುಕೊಟ್ಟಿದೆ. ಈ ನಿರ್ಧಾರ ನಿಜಕ್ಕೂ ಕ್ರಿಕೆಟ್ ತಜ್ಞರಿಗೆ ಅಚ್ಚರಿ ಮೂಡಿಸಿತ್ತು. ಆದರೆ, ನ್ಯೂಜಿಲ್ಯಾಂಡ್ ಮಾಜಿ ನಾಯಕ ಮತ್ತು ಐಪಿಎಲ್ನಲ್ಲಿ ದಶಕಗಳ ಕಾಲ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಡೇನಿಯಲ್ ವೆಟೋರಿ, ಪಾಂಡ್ಯ ಅಂತಹ ಆಟಗಾರನನ್ನು ಬಿಟ್ಟುಕೊಡಲು ಯಾವುದೇ ಫ್ರಾಂಚೈಸಿ ಇಷ್ಟಪಡಲ್ಲ, ಇಲ್ಲಿ ಹಣದ ಒಪ್ಪಂದದ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನು 16 ಕೋಟಿ ರೂ, ಜಸ್ಪ್ರೀತ್ ಬುಮ್ರಾರನ್ನು 12 ಕೋಟಿ ರೂ, ಸೂರ್ಯಕುಮಾರ್ ಯಾದವ್ರನ್ನು 8 ಕೋಟಿ ರೂ ಮತ್ತು ಕೀರನ್ ಪೊಲಾರ್ಡ್ 6 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.