ಪುಣೆ :ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ ಎಂಎಸ್ ಧೋನಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ 40ರ ಹರೆಯದಲ್ಲೂ ನಾಯಕತ್ವವಹಿಸಿಕೊಂಡ ಭಾರತದ 3ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಅಷ್ಟೇ ಅಲ್ಲ, ಕನ್ನಡಿಗ ರಾಹುಲ್ ದ್ರಾವಿಡ್ರನ್ನು ಹಿಂದಿಕ್ಕಿ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡರು.
ಎಂಎಸ್ ಧೋನಿ 2022ರ ಆವೃತ್ತಿಯ ಐಪಿಎಲ್ಗೆ ಕೆಲವೇ ದಿನಗಳಿರುವಾಗ ಸಿಎಸ್ಕೆ ನಾಯಕತ್ವದಿಂದ ಕೆಳಗಿಳಿದು, ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ವಹಿಸಿಕೊಟ್ಟಿದ್ದರು. ಆದರೆ, 8 ಪಂದ್ಯಗಳಲ್ಲಿ ಸಿಎಸ್ಕೆ ಮುನ್ನಡೆಸಿದ ಜಡೇಜಾ 6 ಸೋಲು ಮತ್ತು 2 ಗೆಲುವಿನೊಂದಿಗೆ ನೀರಸ ಪ್ರದರ್ಶನ ತೋರಿದರು.
ಇದರಿಂದ ತಮ್ಮ ಆಟಕ್ಕೂ ತೊಂದರೆಯಾಗುತ್ತಿದೆ ಎಂದು ಭಾವಿಸಿದ ಜಡ್ಡು ಸಿಎಸ್ಕೆ ನಾಯಕತ್ವ ತ್ಯಜಿಸಿದರು. ಹೈದರಾಬಾದ್ ವಿರುದ್ಧ ಮತ್ತೆ ಎಂಎಸ್ ಧೋನಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಭಾರತದ ಅತ್ಯಂತ ಹಿರಿಯ ಟಿ20 ನಾಯಕ ಎನಿಸಿಕೊಂಡರು.
ಧೋನಿಗೀಗ 40 ವರ್ಷ 298 ದಿನಗಳಾಗಿದ್ದು, ಭಾರತೀಯ ಟಿ20 ಕ್ರಿಕೆಟ್ನ ಹಿರಿಯ ನಾಯಕರಾಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ತಮ್ಮ 40 ವರ್ಷ, 268 ದಿನಗಳಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೊನೆಯ ಬಾರಿ ಮುನ್ನಡೆಸಿ ಚುಟುಕು ಕ್ರಿಕೆಟ್ನ್ ಹಿರಿಯ ನಾಯಕ ಎನಿಸಿಕೊಂಡಿದ್ದರು.
3ನೇ ಹಿರಿಯ ನಾಯಕ ಕೂಡ ಕರ್ನಾಟಕದವರೇ ಆಗಿದ್ದಾರೆ. ಪ್ರಸ್ತುತ ಆಯ್ಕೆ ಸಮಿತಿ ಸದಸ್ಯರಾಗಿರುವ ಕನ್ನಡಿಗ ಸುನಿಲ್ ಜೋಶಿ ಅವರು 2010ರಲ್ಲಿ ಸೈಯದ್ ಮುಸ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ಹೈದರಾಬಾದ್ ವಿರುದ್ಧ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ಆಗ ಅವರ ವಯಸ್ಸು 40 ವರ್ಷ ಮತ್ತು 135 ದಿನಗಳಾಗಿತ್ತು. ಭಾರತದ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ಮೂವರು ಮಾತ್ರ ತಂಡಗಳನ್ನು ಮುನ್ನಡೆಸಿದ್ದು, ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ನಿರೂಪಿಸಿದ್ದಾರೆ.
ಇನ್ನು ನಿನ್ನೆಯ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್ಕೆ ತಂಡ 2 ವಿಕೆಟ್ ಕಳೆದುಕೊಂಡು 202 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ಗಳಿಸಿ 18 ರನ್ಗಳ ಸೋಲು ಕಂಡಿತು.
ಇದನ್ನೂ ಓದಿ:ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್