ನ್ಯೂಯಾರ್ಕ್ (ಅಮೆರಿಕ): ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುಎಸ್ ಓಪನ್ ಟೆನಿಸ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್ನ ಸ್ಪೇನ್ನ ಕಾರ್ಲೋಸ್ ಅಲ್ಕರಾಜ್ ಮತ್ತು ಇಟಲಿಯ ಜಾನಿಕ್ ಸಿನ್ನರ್ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಧೋನಿ ವೀಕ್ಷಿಸಿದ್ದಾರೆ.
ದಾಖಲೆ ಸೃಷ್ಟಿಸಿದ ಅಲ್ಕಾರಾಜ್ ಮತ್ತು ಸಿನ್ನರ್ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಭಾರತದ ಬ್ಯಾಟಿಂಗ್ ದಂತಕಥೆ ಎಂಎಸ್ ಧೋನಿ ವೀಕ್ಷಿಸಿದರು ಎಂದು ಯುಎಸ್ ಓಪನ್ ಟೆನಿಸ್‌ನ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಧೋನಿ ಇರುವ ಫೋಟೋ ಸಮೇತ ಶನಿವಾರ ಟ್ವೀಟ್ ಮಾಡಿದೆ. ಅಂದು ತಡರಾತ್ರಿ 2.50ಕ್ಕೆ ಪಂದ್ಯ ಮುಕ್ತಾಯವಾಗಿತ್ತು.
ಖ್ಯಾತ ಸೆಲಿಬ್ರಿಟಿ ಚೆಫ್ ವಿಕಾಸ್ ಖನ್ನಾ ಅವರ ಜೊತೆಗೂಡಿ ಧೋನಿ ವೀಕ್ಷಿಸಿದ್ದಾರೆ. ಕೋರ್ಟ್‌ನ ಸ್ಟ್ಯಾಂಡ್‌ನಲ್ಲಿ ಕುಳಿತು ಸುಮಾರು 5 ಗಂಟೆ ಪಂದ್ಯ ವೀಕ್ಷಿಸಿದರು ಎಂದು ಹೇಳಲಾಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ಧೋನಿ ನಗುವಿನೊಂದಿಗೆ ಚಪ್ಪಾಳೆ ತಟ್ಟುತ್ತಿರುವ ಫೋಟೋ ಈಗ ವೈರಲ್ ಆಗಿದೆ. ಅಲ್ಲದೇ, ಕ್ರಿಕೆಟ್ ತಂಡದ ಮತ್ತೊಬ್ಬ ಮಾಜಿ ನಾಯಕ ಕಪಿಲ್ ದೇವ್ ಸಹ ಯುಎಸ್ ಓಪನ್ ಟೆನಿಸ್‌ನ ಇದೇ ಪಂದ್ಯವನ್ನು ವೀಕ್ಷಿಸಿದ್ದು, ಧೋನಿ ಹಾಗೂ ಕಪಿಲ್ ದೇವ್ ವಿಡಿಯೋ ಕೂಡ ಹರಿದಾಡುತ್ತಿದೆ.
ಕ್ವಾರ್ಟರ್‌ಫೈನಲ್ ಪಂದ್ಯವು ಬರೋಬ್ಬರಿ 5 ಗಂಟೆ 15 ನಿಮಿಷಗಳ ಕಾಲ ನಡೆದಿದ್ದು, ಇದು ಯುಎಸ್ ಓಪನ್ ಟೆನಿಸ್ ಇತಿಹಾಸದಲ್ಲೇ ಎರಡನೇ ಅತಿ ಸುದೀರ್ಘವಾದ ನಡೆದ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಸುದೀರ್ಘ ಪಂದ್ಯದಲ್ಲಿ ಕಾರ್ಲೋಸ್ ಆಲ್ಕಾರಾಜ್ 6-3, 6-7(7), 6-7(0), 7-5,6-3 ಸೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದರು.
ಇದನ್ನೂ ಓದಿ:ಟೆನಿಸ್ಗೆ ವಿದಾಯ ಘೋಷಿಸುವ ಸುಳಿವು ನೀಡಿದ 23 ಗ್ರ್ಯಾಂಡ್ ಸ್ಲಾಮ್ ಒಡತಿ ಸೆರೆನಾ