ಚೆನ್ನೈ(ತಮಿಳುನಾಡು):ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಖುಷಿ ಸಂಗತಿ ಹೊರಬಿದ್ದಿದೆ. ಧೋನಿ 2024ರ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಖಚಿತಪಡಿಸಿದೆ. ಮುಂದಿನ ಸೀಸನ್‌ಗಾಗಿ ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಯಲಿದೆ.
ನವೆಂಬರ್ 26ರೊಳಗೆ ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಎಲ್ಲಾ ತಂಡಗಳಿಗೆ ಈ ಹಿಂದೆ ಸೂಚಿಸಿತ್ತು. ಅದರಂತೆ, ಚೆನ್ನೈ ತಾನು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ನಿರೀಕ್ಷೆಯಂತೆ ಧೋನಿ ಹೆಸರೂ ಇದೆ. ಇದರೊಂದಿಗೆ ಮುಂದಿನ ಸೀಸನ್‌ನಲ್ಲಿ 'ಕ್ಯಾಪ್ಟನ್ ಕೂಲ್' ಭಾಗವಹಿಸುವುದು ಖಾತ್ರಿಯಾಗಿದೆ. ಚೆನ್ನೈಗೆ ಐದನೇ ಐಪಿಎಲ್ ಪ್ರಶಸ್ತಿ ಗೆದ್ದು ಕೊಟ್ಟಿದ್ದ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ಆಡಳಿತ ಮಂಡಳಿ ನಿರ್ಧರಿಸಿದೆ.
ಐಪಿಎಲ್ 2023 ತನ್ನ ವೃತ್ತಿಜೀವನದ ಕೊನೆಯ ಐಪಿಎಲ್ ಎಂದು ಅಂಬಟಿ ರಾಯುಡು ಈಗಾಗಲೇ ಘೋಷಿಸಿದ್ದಾರೆ. ಚೆನ್ನೈ ತಂಡದ ಟ್ರೋಫಿ ಗೆದ್ದ ತಕ್ಷಣ ಅವರು ನಿವೃತ್ತರಾಗಿದ್ದರು. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೆಲಸದ ಹೊರೆ ನಿರ್ವಹಿಸಲು ಮುಂದಿನ ಸೀಸನ್‌ನಲ್ಲಿ ಭಾಗಿಯಾಗದೇ ಇರಲು ನಿರ್ಧರಿಸಿದ್ದಾರೆ. ಕಳೆದ ವರ್ಷದ ಹರಾಜಿನಲ್ಲಿ ಅವರನ್ನು ಚೆನ್ನೈ ಖರೀದಿಸಿತ್ತು. ಕಳೆದ ಸೀಸನ್‌ನಲ್ಲಿ ಸ್ಟೋಕ್ಸ್ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಹೀಗಾಗಿ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು.