ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಕಪ್ ಗೆದ್ದ ಬೆನ್ನಲ್ಲೇ ಮಂಡಿ ನೋವಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರಗೆ ದಾಖಲಾಗಿದ್ದರು. ಧೋನಿಯ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ವಿಶೇಷ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಎಂಎಸ್ ಧೋನಿ ಜೊತೆ ಕಾಣಿಸಿಕೊಂಡಿದ್ದಾರೆ.
ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿ ಶಸ್ತ್ರಚಿಕಿತ್ಸೆ ಮುಗಿಸಿ ಮನೆಗೆ ಮರಳುತ್ತಿದ್ದರು. ಅದೇ ಸಮಯದಲ್ಲಿ ಮೊಹಮ್ಮದ್ ಕೈಫ್ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದರು ಮತ್ತು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಇದಾದ ನಂತರ ಮೊಹಮ್ಮದ್ ಕೈಫ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಿಂದ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಜೊತೆ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಕೈಫ್ ಅವರ ಕುಟುಂಬ ಧೋನಿ ಕುಟುಂಬದೊಂದಿಗೆ ಫೋಟೋ ತೆಗೆದುಕೊಂಡಿದ್ದಾರೆ. ಕ್ಯಾಪ್ಶನ್ನಲ್ಲಿ "ಇಂದು ವಿಮಾನ ನಿಲ್ದಾಣದಲ್ಲಿ ಗ್ರೇಟ್ ವ್ಯಕ್ತಿ ಮತ್ತು ಅವರ ಕುಟುಂಬ. ಶಸ್ತ್ರಚಿಕಿತ್ಸೆ ಮುಗಿಸಿ ಮನೆಗೆ ಮರಳುತ್ತಿದ್ದದ್ದಾರೆ. ನಾನು ನಿನ್ನಂತೆ ಬಾಲ್ಯದಲ್ಲಿ ಫುಟ್‌ಬಾಲ್ ಆಡಿದ್ದೇನೆ ಎಂದು ಧೋನಿ ಹೇಳಿದ್ದರಿಂದ ಮಗ ಕಬೀರ್ ತುಂಬಾ ಖುಷಿಯಾಗಿದ್ದ. ಬೇಗ ಗುಣಮುಖರಾಗಿ, ಮುಂದಿನ ಸೀಸನ್ನಲ್ಲಿ ಸಿಗೋಣ ಚಾಂಪಿಯನ್" ಎಂದು ಬರೆದುಕೊಂಡಿದ್ದಾರೆ.
ಕೈಫ್ ಮಗನ ಜೊತೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಧೋನಿ ತಮ್ಮ ಕುಟುಂಬದೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಧೋನಿ ಮನೆಗೆ ಮರಳುತ್ತಿದ್ದ ಸಂದರ್ಭದ ಫೋಟೋ ಇದಾಗಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಮಂಡಿ ನೋವಿನ ನಡುವೆಯೂ ಪಂದ್ಯಗಳನ್ನು ಆಡಿದ್ದರು. ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ನ್ನು ಈ ಬಾರಿಯ ಚಾಂಪಿಯನ್ ಆಗಿ ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಕಪ್ ಗೆದ್ದುಕೊಂಡಿದೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ನ ಅತಿ ಹೆಚ್ಚು ಕಪ್ ಗೆದ್ದ ತಂಡದ ಪಟ್ಟಿಯಲ್ಲಿ ಚೆನ್ನೈ ಮತ್ತು ಮಂಬೈ ಇಂಡಿಯನ್ಸ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದೆ.
ಕೋಲ್ಕತ್ತಾ ವಿರುದ್ಧ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಲೀಗ್ನ ಕೊನೆಯ ಪಂದ್ಯದಲ್ಲಿ ಧೋನಿ ಮೈದಾನದ ಸುತ್ತ ನಡೆದು ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದರು. ಈ ವೇಳೆ, ಅವರು ಮಂಡಿನೋವಿನ ಕಾರಣ ಐಸ್ ಪ್ಯಾಕ್ ಅನ್ನು ತಮ್ಮ ಕಾಲಿಗೆ ಕಟ್ಟಿಕೊಂಡಿದ್ದರು. ಅಲ್ಲದೇ ಈ ಆವೃತ್ತಿಯ ಆರಂಭದ ಪಂದ್ಯಕ್ಕೂ ಮುನ್ನ ಅವರು ಕೆಲ ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧೋನಿ ನೋವಿನ ನಡುವೆಯೂ ಆಡಿದ್ದರು.
ಐಪಿಎಲ್ನಿಂದ ಧೋನಿ ನಿವೃತ್ತಿ ಈ ವರ್ಷ ಇಲ್ಲ:16ನೇ ಐಪಿಎಲ್ ಸೀಸನ್ನಲ್ಲಿ ಹೆಚ್ಚು ಚರ್ಚೆಯಲ್ಲಿದ್ದ ವಿಷಯ ಎಂದರೆ ಧೋನಿಯ ನಿವೃತ್ತಿ. ಹೀಗಾಗಿ ಚೆನ್ನೈ ತಂಡ ಯಾವುದೇ ಮೈದಾನದಲ್ಲಿ ಹೋಗಿ ಆಡಿದರೂ ಸ್ಟೇಡಿಯಂ ಚೆನ್ನೈ ಅಭಿಮಾನಿಗಳಿಂದ ತುಂಬಿಕೊಳ್ಳುತ್ತಿತ್ತು. ಪಂದ್ಯ ಮುಗಿದ ನಂತರವೂ ಧೋನಿ ಹೇಳುವ ಮಾತಗಳನ್ನು ಕೇಳಲು ಜನ ಕಾದು ಕುಳಿತಿರುತ್ತಿದ್ದರು. ಫೈನಲ್ ಪಂದ್ಯ ಮಳೆಯಿಂದಾಗಿ ರಾತ್ರಿ 12 ಗಂಟೆ ಮೇಲೆ ಎರಡನೇ ಇನ್ನಿಂಗ್ಸ್ ಆರಂಭವಾದರೂ ಚೆನ್ನೈ ತಂಡ 70 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡಿಯೇ ಮೈದಾನದಿಂದ ತೆರಳಿದ್ದರು. ಧೋನಿ ಪ್ರಶಸ್ತಿ ಗೆದ್ದ ನಂತರ ಮುಂದಿನ ವರ್ಷವೂ ಚೆನ್ನೈಗಾಗಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:2 ವರ್ಷದಿಂದ ಸತತ ಪರಿಶ್ರಮ, ಈ ಸಲ ಪ್ರಶಸ್ತಿ ಸಿಗುತ್ತೆ: ರಾಹುಲ್ ದ್ರಾವಿಡ್