ಇದೇ ತಿಂಗಳಾಂತ್ಯದಿಂದ ಐಪಿಎಲ್ ಫೆಸ್ಟಿವಲ್ ಆರಂಭವಾಗಲಿದೆ. ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ ಶುರುವಾಗಿದ್ದು ಚುಟುಕು ಕ್ರಿಕೆಟ್ ಮನರಂಜನೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸದೇ ಇರುವ ಬಹುತೇಕ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ತಲೈವಾ ಮಾಹಿ ಕೂಡ ಚೆನ್ನೈ ತಂಡ ಸೇರಿದ್ದು ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ತಯಾರಿಯಲ್ಲಿದ್ದಾರೆ. ಇದಕ್ಕಾಗಿ ಮೈದಾನದಲ್ಲಿ ಬಿರುಸಿನ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದುದು ಕಂಡುಬಂತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ಟ್ರೆಂಡ್ ಆಗಿದೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದ ನಂತರ ಅವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಆವೃತ್ತಿಯ ಮೊದಲ ಪಂದ್ಯದಲ್ಲೇ ಧೋನಿಯನ್ನು ಫ್ಯಾನ್ಸ್ ನೋಡಬಹುದು. ಮಾರ್ಚ್ 31ರಂದು ನಡೆಯುವ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಎದುರಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಎಂ.ಎಸ್.ಧೋನಿ ಅಭ್ಯಾಸದ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಧೋನಿ ಐಪಿಎಲ್‌ಗಾಗಿ ನೆಟ್‌ನಲ್ಲಿ ಸಿಎಸ್‌ಕೆ ತಂಡದೊಂದಿಗೆ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಇದುವರೆಗೆ 16 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಲೈಕ್ ಒತ್ತಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ಅವರು ಅಭ್ಯಾಸ ಮಾಡುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಧೋನಿ ನಿಭಾಯಿಸುವ ಸಾಧ್ಯತೆ ಇದೆ. ಟ್ವಿಟರ್ ಪ್ರೋಫೈಲ್ನಲ್ಲಿ ಧೋನಿ ಫೋಟೋವನ್ನು ಆ ರೀತಿಯೇ ಬಿಂಬಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ನಾಯಕತ್ವವನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ವಹಿಸಲಾಗಿತ್ತು. ತಮ್ಮ ನಾಯಕತ್ವದಲ್ಲಿ ತಂಡ ಸತತ ಸೋಲು ಕಂಡ ನಂತರ ಜಡೇಜಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ತಮ್ಮ ನಾಯಕತ್ವದಿಂದ ಎಲ್ಲರನ್ನೂ ಸಾಕಷ್ಟು ಸೆಳೆದಿದ್ದಾರೆ. ಆದ್ದರಿಂದ ಧೋನಿ ನಂತರ ಬೆನ್ ಸ್ಟೋಕ್ಸ್ ಹೆಸರು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಅದೇನೇ ಇದ್ದರೂ ಚೆನ್ನೈ ಯಾವ ಆಟಗಾರನನ್ನು ತಂಡದ ನಾಯಕನಾಗಿ ಆಯ್ಕೆ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಧೋನಿಯ ಕೊನೆಯ ಆವೃತ್ತಿ?:ಐಪಿಎಲ್ 16ನೇ ಸೀಸನ್ಗೆ ಧೋನಿ ಸಂಪೂರ್ಣ ತಯಾರಿ ನಡೆಸುತ್ತಿದ್ದಾರೆ. ಇದು ಚಾಂಪಿಯನ್ ಕ್ರಿಕೆಟಿಗನ ವೃತ್ತಿ ಜೀವನದ ಕೊನೆಯ ಟೂರ್ನಿಯಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇದನ್ನು ವಿದಾಯದ ಆವೃತ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಧೋನಿಯಾಗಲಿ, ಸಿಎಸ್‌ಕೆ ತಂಡದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ಐಪಿಎಲ್ 2023 ರ ವೇಳಾಪಟ್ಟಿ ಬಿಡುಗಡೆಯಾದ ನಂತರ ವಿದಾಯದ ವಿಚಾರಗಳು ಹೆಚ್ಚು ಚರ್ಚೆಗೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೆ ಮೇ 14ರಂದು ಚೆನ್ನೈ ಮೈದಾನದಲ್ಲಿ ನಡೆಯಲಿರುವ ಕೋಲ್ಕತ್ತಾ ಎದುರಿನ ಪಂದ್ಯ ಕೊನೆಯದ್ದು ಎಂದೇ ಹೇಳಲಾಗುತ್ತಿದೆ. ಹೆಚ್ಚಿನವರು ತಲೈವಾ ನಾಯಕರಾಗಿ ಕೊನೆಯ ಕಪ್ ಗೆದ್ದು ವಿದಾಯ ಹೇಳುತ್ತಾರೆ ಎಂದು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಮಹಿಳಾ ಐಪಿಎಲ್: ಬಾಲಿವುಡ್ ಬೆಡಗಿಯರ ಆಕರ್ಷಕ ನೃತ್ಯ ಪ್ರದರ್ಶನ, ಪ್ರೇಕ್ಷಕರು ಥ್ರಿಲ್!- ನೋಡಿ