ರಾಂಚಿ (ಜಾರ್ಖಂಡ್):ಎಂ.ಎಸ್.ಧೋನಿ. ವಯಸ್ಸು 40 ದಾಟಿದರೂ ಈಗಲೂ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಅಪರೂಪದ ಕ್ರಿಕೆಟಿಗ. ಅಷ್ಟೇ ಏಕೆ? ದೇಶಕ್ಕೆ ತೆರಿಗೆ ಕಟ್ಟುವ ವಿಚಾರದಲ್ಲಿಯೂ ಇವರು ನಿರಂತರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನ ಶುರು ಮಾಡಿದಾಗಿನಿಂದಲೂ ನಿರಂತರವಾಗಿ ರಾಜ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರನೂ ಹೌದು.
ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕವೂ ಹೆಚ್ಚು ವೈಯಕ್ತಿಕ ತೆರಿಗೆಯನ್ನು ಇವರು ಪಾವತಿಸುತ್ತಿದ್ದಾರೆ ಎಂದು ಜಾರ್ಖಂಡ್ ಆದಾಯ ತೆರಿಗೆ ಇಲಾಖೆ (ಐಟಿ) ದೃಢಪಡಿಸಿದೆ. 2022-23ರನೇ ಸಾಲಿನ ತೆರಿಗೆ ಪಾವತಿಯಲ್ಲೂ ಧೋನಿಯದ್ದೇ ಮೇಲುಗೈ. ಆಗಸ್ಟ್ 15, 2020 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ ಇವರ ಆದಾಯದಲ್ಲಿ ಇಳಿಕೆಯಾಗಿಲ್ಲ.
2022-23ರಲ್ಲಿ ಧೋನಿ ಆದಾಯವು ಅವರು ತೆರಿಗೆ ಇಲಾಖೆಗೆ ಮುಂಗಡ ತೆರಿಗೆ ಪಾವತಿಯ ಅಂಕಿ-ಅಂಶದಂತೆ ಹೇಳುವುದಾದರೆ ಕಳೆದ ವರ್ಷದ ಆದಾಯಕ್ಕೆ ಬಹುತೇಕ ಸಮನಾಗಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಧೋನಿ ಐಟಿ ಇಲಾಖೆಗೆ ಒಟ್ಟು 38 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷವೂ ಅಷ್ಟೇ ಮೊತ್ತವನ್ನು ಮುಂಗಡ ತೆರಿಗೆಯಾಗಿ ಠೇವಣಿ ಇಟ್ಟಿದ್ದರು.
₹130 ಕೋಟಿ ಆದಾಯ:ಐಟಿಇಲಾಖೆ ಪ್ರಕಾರ, ಧೋನಿ ಠೇವಣಿ ಮಾಡಿದ 38 ಕೋಟಿ ರೂ ಮುಂಗಡ ತೆರಿಗೆ ಆಧರಿಸಿ ಅವರ ಆದಾಯ ಸುಮಾರು 130 ಕೋಟಿ ರೂಪಾಯಿಗಳೆಂಬ ನಿರೀಕ್ಷೆಯಿದೆ. 2019-20 ರಲ್ಲಿ 28 ಕೋಟಿ ರೂ ಪಾವತಿಸಿದ್ದರು. 2018-2019 ರಲ್ಲಿಯೂ ಅಷ್ಟೇ ತೆರಿಗೆ ಕಟ್ಟಿದ್ದರು. ಈ ಹಿಂದೆ 2017-18ರಲ್ಲಿ 12.17 ಕೋಟಿ ರೂ ಹಾಗೂ 2016-17ರಲ್ಲಿ 10.93 ಕೋಟಿ ರೂ ಪಾವತಿಸಿದ್ದರು.