ವಿಜಯವಾಡ(ಆಂಧ್ರಪ್ರದೇಶ):ವಿಶ್ವ ಕ್ರಿಕೆಟ್ ಹಾಗೂ ಭಾರತ ಕ್ರಿಕೆಟ್ ಕಂಡಿರುವ ಪ್ರಮುಖ ಕ್ಯಾಪ್ಟನ್ಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಭಾರತಕ್ಕೆ ಅನೇಕ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿರುವ ಮಾಹಿ, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಾತ್ರ ಭಾಗಿಯಾಗ್ತಿದ್ದಾರೆ.
ಮೂರು ಐಸಿಸಿ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ ನಾಳೆ 41ನೇ ವಸಂತಕ್ಕೆ ಕಾಲಿಡಲಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಮಾಹಿ ಅಭಿಮಾನಿಗಳು ಬರೋಬ್ಬರಿ 41 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜನಿಗೆ ವಿಶೇಷವಾಗಿ ವಿಶ್ ಮಾಡಲು ಮುಂದಾಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯ ಈ ಕಟೌಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೈಯಲ್ಲಿ ಬ್ಯಾಟ್ ಹಿಡಿದು, ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿರುವ ಭಂಗಿಯ ಫೋಟೋ ಇದಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆ 12ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಸದ್ಯ ಲಂಡನ್ನಲ್ಲಿರುವ ಮಾಹಿ ಅಲ್ಲೇ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿರಿ:ಅವಕಾಶ ಕೈಚೆಲ್ಲಿದ್ದು ಭಾರಿ ನಿರಾಶೆ ಮೂಡಿಸಿದೆ: ರಾಹುಲ್ ದ್ರಾವಿಡ್
ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 350 ಏಕದಿನ ಪಂದ್ಯಗಳಿಂದ 10,773 ರನ್ ಹಾಗೂ 90 ಟೆಸ್ಟ್ ಪಂದ್ಯಗಳು 4,876 ಹಾಗೂ 98 ಟಿ-20 ಪಂದ್ಯಗಳಿಂದ 1,617 ರನ್‌ಗಳನ್ನು ಗಳಿಸಿದ್ದಾರೆ.