ಮುಂಬೈ: ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಾಯಕನಾಗಿ ಸಿಎಸ್ಕೆ ತಂಡವನ್ನು ಮುನ್ನಡೆಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಟಿ-20 ಕ್ರಿಕೆಟ್ನಲ್ಲಿ ಒಂದೇ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ 2ನೇ ಕ್ರಿಕೆಟಿಗ ಎಂಬ ದಾಖಲೆಗೆ ಧೋನಿ ಪಾಲಾಗಿತ್ತು. ಇಂದು ನಾಯಕನಾಗಿ 200 ಪಂದ್ಯಗಳಲ್ಲಿ ಒಂದೇ ಫ್ರಾಂಚೈಸಿಯನ್ನು ಮುನ್ನಡೆಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ.
ಎಂಎಸ್ ಧೋನಿ ಐಪಿಎಲ್ನಲ್ಲಿ 207 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಚೆನ್ನೈ ಪರ 177 ಮತ್ತು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ಪರ 30 ಪಂದ್ಯಗಳನ್ನಾಡಿದ್ದಾರೆ. ಇನ್ನು ಚೆನ್ನೈ ಪರ ಚಾಂಪಿಯನ್ ಲೀಗ್ನಲ್ಲಿ 24 ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ ಇಂದಿನ ಪಂದ್ಯವನ್ನು ಸೇರಿದಂತೆ ಧೋನಿ ಸಿಎಸ್ಕೆ ಪರ 201 ಪಂದ್ಯಗಳನ್ನಾಡಿದ್ದು, 200ರಲ್ಲಿ ನಾಯಕರಾಗಿದ್ದಾರೆ. 2012ರ ಚಾಂಪಿಯನ್ ಲೀಗ್ ವೇಳೆ ಧೋನಿ ಒಂದು ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿ ಆಡಿದ್ದರು.
ಒಟ್ಟಾರೆ ಟಿ-20 ಕ್ರಿಕೆಟ್ನಲ್ಲೂ ನಾಯಕನಾಗಿ ಅತ್ಯಧಿಕ ಪಂದ್ಯಗಳನ್ನಾಡಿರುವ ದಾಖಲೆಯೂ ಧೋನಿ ಹೆಸರಿನಲ್ಲಿದೆ. ಧೋನಿ ಭಾರತ ತಂಡ, ಸಿಎಸ್ಕೆ ಮತ್ತು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡಗಳನ್ನು ಸೇರಿ 286 ಪಂದ್ಯಗಳಲ್ಲಿ ನಾಯಕನಾಗಿದ್ದಾರೆ. 2ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕ ಡೇರನ್ ಸಾಮಿ ಇದ್ದು, ಅವರು 208 ಪಂದ್ಯಗಳಲ್ಲಿ ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ.
ಇದನ್ನು ಓದಿ:ಸಿಎಸ್ಕೆ ಪರ 200ನೇ ಪಂದ್ಯದಲ್ಲಿ ಗೆಲುವು: ನನಗೆ ತುಂಬಾ ವಯಸ್ಸಾಯ್ತು ಎಂದ ಧೋನಿ!