ರಾಂಚಿ(ಜಾರ್ಖಂಡ್): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಲೈವ್ ಮೂಲಕ ಮಹತ್ವದ ವಿಷಯಗಳನ್ನು ಹಂಚಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಶನಿವಾರ ಧೋನಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿತ್ತು. ಆದ್ರೆ ಧೋನಿ ಫೇಸ್ಬುಕ್ ಲೈವ್ ಬಂದು ಬಿಸ್ಕೆಟ್ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದಾರೆ.
'ನಾನು ಸೆಪ್ಟೆಂಬರ್ 25ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನೂ ಲೈವ್ನಲ್ಲಿ ಭೇಟಿಯಾಗಲು ಆಶಿಸುತ್ತೇನೆ!' ಎಂದು ಎಂಎಸ್ಡಿ ಶನಿವಾರ ಪೋಸ್ಟ್ ಮಾಡಿದ್ದರು. ಎಂಎಸ್ ಧೋನಿ ಅವರ ಈ ಘೋಷಣೆಯ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಕ್ರಿಕೆಟ್ ಅಭಿಮಾನಿಗಳಲ್ಲಿ ವಿವಿಧ ಊಹಾಪೋಹಗಳನ್ನು ಹರಡಲು ಪ್ರಾರಂಭಿಸಿತು. ಐಪಿಎಲ್‌ನಿಂದ ಧೋನಿ ನಿವೃತ್ತಿಯ ಬಗ್ಗೆ ಊಹಾಪೋಹ ಅಭಿಮಾನಿಗಳ ಬಳಗದಲ್ಲಿ ಹರದಾಡಿತು. ಆದರೆ ಈಗ ಧೋನಿ ಕೊಟ್ಟಿರುವ ಚಮಕ್ನಿಂದ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನ ಸಿಕ್ಕಂತಾಗಿದೆ. ಸದ್ಯ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಕುರಿತ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.
ಧೋನಿ ನೇರಪ್ರಸಾರ ಬಂದಾಗ ಲಕ್ಷಾಂತರ ಜನರು ಅವರನ್ನು ಲೈವ್ ಆಗಿ ವೀಕ್ಷಿಸುತ್ತಿದ್ದರು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಭಾರತದಲ್ಲಿ ಬಿಸ್ಕೆಟ್ ಕಂಪನಿ ಬಿಡುಗಡೆ ಮಾಡಲು ಬಂದಿದ್ದರು. ಈ ಹಿಂದೆ ಧೋನಿ ಮತ್ತು ಅವರ ಮಗಳು ಜೀವಾ ಕೂಡ ಈ ಕಂಪನಿಗಾಗಿ ಜಾಹೀರಾತುಗಳನ್ನು ನೀಡಿದ್ದರು. MS ಧೋನಿ 15 ಆಗಸ್ಟ್ 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೂ ಅವರು ಇನ್ನೂ ಫ್ರಾಂಚೈಸ್ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು IPL ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿದ್ದಾರೆ.
ಎಂಎಸ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲೊಬ್ಬರು. ನಾಯಕತ್ವದಲ್ಲಿ ಅದ್ಭುತ ಚಿಂತನೆ, ವಿಶಿಷ್ಟ ಕೌಶಲ್ಯ ಹಾಗೂ ಹೆಲಿಕಾಪ್ಟರ್ ಶಾಟ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2007ರಲ್ಲಿ ಐಸಿಸಿ ವಿಶ್ವ ಟ್ವೆಂಟಿ 20, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ನಾಯಕನಾಗಿರುವ ಧೋನಿ ಇಂದು ಏನೆಲ್ಲಾ ಘೋಷಣೆ ಮಾಡಬಹುದು ಎಂಬ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದ್ರೆ ಅವರು ಲೈವ್ಗೆ ಬಂದು ಬಿಸ್ಕೆಟ್ ಉತ್ಪನ್ನ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದರು.
ಎಂಎಸ್ ಧೋನಿ 15 ಆಗಸ್ಟ್ 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. 2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಧೋನಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 41 ವರ್ಷದ ಎಂಎಸ್ ಧೋನಿ 350 ODI, 98 T20 ಅಂತಾರಾಷ್ಟ್ರೀಯ ಮತ್ತು 90 ಟೆಸ್ಟ್ ಪಂದ್ಯಗಳ ಮೂಲಕ 17,266 ರನ್ ಕಲೆ ಹಾಕಿದ್ದಾರೆ. ಈ ಅವಧಿಯಲ್ಲಿ ಅವರು 108 ಅರ್ಧ ಶತಕ ಮತ್ತು 16 ಶತಕಗಳನ್ನು ಗಳಿಸಿದರು.
ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಬಾರಿ ಐಸಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಅವರು ಐಪಿಎಲ್‌ನಲ್ಲಿ ಸಿಎಸ್‌ಕೆಯನ್ನು ನಾಲ್ಕು ಬಾರಿ ಚಾಂಪಿಯನ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಐಪಿಎಲ್ 2023ರಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಆಟದಿಂದ ಸುದೀರ್ಘ ವಿರಾಮವನ್ನು ಅನುಭವಿಸುತ್ತಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅವರು ಯುಕೆ ಮತ್ತು ಯುಎಸ್ ಪ್ರವಾಸದಲ್ಲಿದ್ದರು. ಕೆಲವು ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಯಶಸ್ಸಿನ ಮಂತ್ರ ಮತ್ತು ಕಠಿಣ ಪರಿಶ್ರಮದ ಮಹತ್ವದ ಬಗ್ಗೆ ಮಾತನಾಡಿದರು.
ಓದಿ:ಇಂದು ಫೇಸ್ಬುಕ್ ಲೈವ್ನಲ್ಲಿ ಧೋನಿ ಮಹತ್ವದ ಘೋಷಣೆ