ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಭವಿಷ್ಯದ ಸ್ಟಾರ್ ಬ್ಯಾಟರ್ ಆಗಿ ತಂಡದಲ್ಲಿ ಮಿಂಚುತ್ತಿರುವ ಅವರು, ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಗಳನ್ನು ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ಗಿಲ್ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ಗೆ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.
ಇದೀಗ ಗಿಲ್‌ಗೆ 25ನೇ ವಯಸ್ಸಿಗೆ ಭಾರತ ಪರ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ದಾಖಲೆ ಮಾಡುವ ಸುವರ್ಣಾವಕಾಶ ಲಭಿಸಲಿದೆ. ಸೆಪ್ಟೆಂಬರ್ 8, 2023 ರಂದು 24 ನೇ ವರ್ಷಕ್ಕೆ ಗಿಲ್ ಕಾಲಿಟ್ಟರು. ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿಯಲು ಗಿಲ್‌ಗೆ ಇನ್ನೂ ಸುಮಾರು 11 ತಿಂಗಳುಗಳು 13 ದಿನಗಳ ಸಮಯ ಇದೆ.
ಶುಭಮನ್ ಗಿಲ್ ಇದುವರೆಗೆ ಭಾರತ ಪರ ಏಕದಿನ ಮಾದರಿಯಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಗಿಲ್ 24 ವರ್ಷ 17 ದಿನಗಳ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ 6 ಶತಕಗಳನ್ನು ಬಾರಿಸಿದ್ದಾರೆ. ಅವರಿಗಿಂತ ಮೊದಲು, ಅನುಭವಿ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 25 ನೇ ವಯಸ್ಸಿನಲ್ಲಿ ಭಾರತಕ್ಕಾಗಿ 7 ಶತಕಗಳನ್ನು ಗಳಿಸಿದ್ದರು. ಇದೀಗ ಗಿಲ್ ಇನ್ನೂ 2 ಶತಕ ಬಾರಿಸುವ ಮೂಲಕ ಯುವರಾಜ್ ಸಿಂಗ್ ಅವರನ್ನು ಮೀರಿಸುವ ಅವಕಾಶ ಇದೆ. ಶುಭಮನ್ ಗಿಲ್ ತಮ್ಮ ಅಮೋಘ ಫಾರ್ಮ್ ಅನ್ನು ಮುಂದುವರಿಸಿದರೆ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಅವರ ಈ ದಾಖಲೆಯನ್ನು ಮುರಿಯಬಹುದು.