ಮುಂಬೈ: ಬ್ಯಾಟ್ಸ್ಮನ್ಗಳ ಪಾಲಿನ ಸ್ವರ್ಗವಾಗಿರುವ ವಾಂಖೆಡೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳು ಮೇಲುಗೈ ಸಾಧಿಸಿದ್ದು, ಕೆಕೆಆರ್ ತಂಡವನ್ನು ಕೇವಲ 133 ರನ್ಗಳಿಗೆ ನಿಯಂತ್ರಿಸಿದ್ದಾರೆ.
ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಕೋಲ್ಕತ್ತಾ ತಂಡ ನಿಧಾನಗತಿಯ ಆಟ ನಡೆಸಿತು. ಪವರ್ ಪ್ಲೇನಲ್ಲಿ ಕೇವಲ 24 ರನ್ಗಳಿಸಿದ್ದಲ್ಲದೇ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು.
2ನೇ ವಿಕೆಟ್ಗೆ ತ್ರಿಪಾಠಿ ಮತ್ತು ರಾಣಾ 25 ರನ್ ಸೇರಿಸಿದರು. ರಾಣಾ ರನ್ಗಳಿಸಲು ಪರದಾಡಿ 25 ಎಸೆತಗಳಲ್ಲಿ ಕೇವಲ 22 ರನ್ಗಳಿಸಿ ಚೇತನ್ ಸೆಕಾರಿಯಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನರೈನ್ ಕೇವಲ 6 ರನ್ಗೆ ಸೀಮಿತವಾದರೆ, ಇವರ ಬೆನ್ನಲ್ಲೇ ದುರಾದೃಷ್ಟ ರೀತಿಯಲ್ಲಿ ನಾಯಕ ಮಾರ್ಗನ್ ಒಂದೂ ಎಸೆತ ಎದುರಿಸದೇ ರನ್ಔಟ್ ಆಗಿ ನಿರ್ಗಮಿಸಿದರು.
ಈ ಹಂತದಲ್ಲಿ ತ್ರಿಪಾಠಿ ಮತ್ತು ಕಾರ್ತಿಕ್ 5ನೇ ವಿಕೆಟ್ಗೆ 33 ರನ್ಗಳ ಜೊತೆಯಾಟ ನಡೆಸಿ ಚೇತರಿಕೆಯ ಆಟ ತೋರಿದರು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಮುಸ್ತಫಿಜುರ್ ರೆಹಮಾನ್ ಬೌಲಿಂಗ್ನಲ್ಲಿ ಪರಾಗ್ಗೆ ಕ್ಯಾಚ್ ನೀಡಿ ಔಟಾದರು.
ತ್ರಿಪಾಠಿ ವಿಕೆಟ್ ನಂತರ ಕೆಕೆಆರ್ ಮತ್ತೆ ದಿಢೀರ್ ಕುಸಿತ ಕಂಡಿತು. ರಸೆಲ್ 9 ಮತ್ತು ದಿನೇಶ್ ಕಾರ್ತಿಕ್ ಒಂದೇ ಓವರ್ನಲ್ಲಿ ಮೋರಿಸ್ಗೆ ವಿಕೆಟ್ ಒಪ್ಪಿಸಿದರು. 20 ನೇ ಓವರ್ನಲ್ಲಿ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಕಮ್ಮಿನ್ಸ್ 10 ಮತ್ತು ಶಿವಂ ಮಾವಿ 5 ರನ್ಗಳಿಸಿ ಮೋರಿಸ್ಗೆ ವಿಕೆಟ್ ಒಪ್ಪಿಸಿದರು.
ಒಟ್ಟಾರೆ 20 ಓವರ್ಗಳಲ್ಲಿ 9 ಕಳೆದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ 133 ರನ್ಗಳಿಸಿದೆ. ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ರಾಜಸ್ಥಾನ ತಂಡದ ಮೋರಿಸ್ 23ರನ್ ನೀಡಿ 4 ವಿಕೆಟ್ ಪಡೆದರು. ಮುಸ್ತಫಿಜುರ್, ಚೇತನ್ ಸಕಾರಿಯಾ ಮತ್ತು ಉನಾದ್ಕಟ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.