ದುಬೈ: ಒಂದು ಅದ್ಭುತ ಆಟ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದಕ್ಕೆ ಮೊಹಮ್ಮದ್ ಸಿರಾಜ್ ಸಾಕ್ಷಿಯಾಗಿದ್ದಾರೆ. ಏಷ್ಯಾಕಪ್ ಫೈನಲ್ ಪ್ರದರ್ಶನದ ನಂತರ ಕ್ರಿಕೆಟ್ ಹೊರತಾಗಿಯೂ ಸಿರಾಜ್ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಫೈನಲ್ ಪಂದ್ಯದ ಪ್ರದರ್ಶನ ಕಾರಣ ಐಸಿಸಿ ಶ್ರೇಯಾಂಕದಲ್ಲೂ ಸಿರಾಜ್ ಅದ್ಭುತ ಏರಿಕೆ ಕಂಡಿದ್ದಾರೆ. ಬರೋಬ್ಬರಿ ಎಂಟು ಸ್ಥಾನಗಳನ್ನು ಜಿಗಿದಿರುವ ಸಿರಾಜ್ ವಿಶ್ವದ ಏಕದಿನ ನಂ.1 ಬೌಲರ್ ಆಗಿದ್ದಾರೆ.
ಏಷ್ಯಾಕಪ್ ಫೈನಲ್ ಪಂದ್ಯವನ್ನು ಯಾರೂ ಮರೆತಿರಲು ಸಾಧ್ಯವಿಲ್ಲ. ಈ ಪಂದ್ಯ ನಡೆದು ಇಂದು 3ನೇ ದಿನ ಆಗಿದೆ ಅಷ್ಟೇ. ಟಾಸ್ ಗೆದ್ದು ಬ್ಯಾಟಿಂಗ್ಗೆ ಮೈದಾನಕ್ಕೆ ಬಂದಿದ್ದ ಲಂಕಾಗೆ ಮೊದಲ ಓವರ್ನಲ್ಲಿ ಬುಮ್ರಾ ಒಂದು ವಿಕೆಟ್ ಪಡೆದು ಶಾಕ್ ಕೊಟ್ಟರೆ, ಸಿರಾಜ್ ಪಂದ್ಯದ ನಾಲ್ಕನೇ ಓವರ್ನಲ್ಲಿ 4 ವಿಕೆಟ್ ಕಿತ್ತು ಲಂಕಾದ ಬಲವನ್ನೇ ಮುರಿದಿದ್ದರು. ಮತ್ತೆ ಪಂದ್ಯದ 6ನೇ ಮತ್ತು 12ನೇ ಓವರ್ನಲ್ಲಿ ಒಂದೊಂದು ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ 7 ಓವರ್ ಮಾಡಿದ್ದ ಸಿರಾಜ್ 21 ರನ್ ಕೊಟ್ಟು 6 ವಿಕೆಟ್ ಉರುಳಿಸಿದ್ದರು.
ಈ ಬೌಲಿಂಗ್ ಪ್ರದರ್ಶನದಿಂದ ಮೊಹಮ್ಮದ್ ಸಿರಾಜ್ ಒಟ್ಟಾರೆ ಏಷ್ಯಾಕಪ್ನಲ್ಲಿ 12.2 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಉರುಳಿಸಿದರು. ಇದರಿಂದ ಅವರು ಹ್ಯಾಜಲ್‌ವುಡ್, ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್‌ರನ್ನು ಹಿಂದಿಕ್ಕಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಏಕದಿನ ಸರಣಿಯಲ್ಲಿ ಕೇಶವ್ ಮಹಾರಾಜ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದ 9 ಸ್ಥಾನಗಳ ಏರಿಕೆ ಕಂಡಿದ್ದು, 15ನೇ ಶ್ರೆಯಾಂಕವನ್ನು ಅಲಂಕರಿಸಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ ಜೋಡಿ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಅವರ ಶ್ರೇಯಾಂಕಗಳನ್ನು ಕ್ರಮವಾಗಿ ನಂ. 4 ಮತ್ತು 5 ನೇ ಸ್ಥಾನಕ್ಕೆ ಸುಧಾರಿಸಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕ: ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 182 ರನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಗಮನಾರ್ಹ 20 ಸ್ಥಾನಗಳ ಏರಿಕೆ ಕಂಡಿದ್ದು, 9ನೇ ಶ್ರೇಯಾಂಕ ಅಲಂಕರಿಸಿದ್ದಾರೆ. 9ನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ 10ಕ್ಕೆ ಕುಸಿತ ಕಂಡಿದ್ದಾರೆ.
ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡಕ್ಕಾಗಿ ಆಡುತ್ತಿರು ಆಲ್ರೌಂಡರ್ ಬೆನ್ಸ್ಟೊಕ್ಸ್ ಶ್ರೇಯಾಂಕದಲ್ಲೂ ಏರಿಕೆ ಕಂಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಪರ ಏಕದಿನದಲ್ಲಿ ಅತಿ ಹೆಚ್ಚು ರನ್ (182) ಕಲೆ ಹಾಕಿದ ದಾಖಲೆ ಮಾಡಿದ್ದರು. ಈ ಬ್ಯಾಟಿಂಗ್ನಿಂದಾಗಿ ಸ್ಟೋಕ್ಸ್ ರ್ಯಾಂಕಿಂಗ್ನಲ್ಲೂ ಏರಿಕೆ ಕಂಡಿದ್ದು 36ನೇ ಸ್ಥಾನವನ್ನು ತಲುಪಿದ್ದಾರೆ.
ಇದನ್ನೂ ಓದಿ:ICC trophy: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023.. ರಾಮೋಜಿ ಫಿಲ್ಮ್ ಸಿಟಿ ಅಂಗಳದಲ್ಲಿ ವಿಶ್ವಕಪ್ ಟ್ರೋಫಿ ಪ್ರದರ್ಶನಕ್ಕೆ