ಕೊಲಂಬೊ (ಭಾರತ): ಏಷ್ಯಾಕಪ್ನಲ್ಲಿ ಭಾಗವಹಿಸಿದ ತಂಡದ ಆಟಗಾರರು ಎಷ್ಟು ಶ್ರಮಿಸಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಶ್ರೀಲಂಕಾದ ಆರ್ ಪ್ರೇಮದಾಸ್ ಕ್ರೀಡಾಂಗಣದ ಮೈದಾನ ಸಿಬ್ಬಂದಿ ಮಾತ್ರ ಏಷ್ಯಾಕಪ್ ಪಂದ್ಯಗಳಿಗಾಗಿ ಹಗಲಿರುಳು ಕಷ್ಟ ಪಟ್ಟಿದ್ದಾರೆ. ಅವರ ಶ್ರಮಕ್ಕೆ ಎಸಿಸಿ ಗೌರವಿಸಿದೆ. ಅಲ್ಲದೇ ಫೈನಲ್ ಪಂದ್ಯದ ಮ್ಯಾಚ್ ವಿನ್ನರ್ ಸಿರಾಜ್ ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನ ಸಿಬ್ಬಂದಿಗೆ ಕೊಡಲು ನಿರ್ಧಾರ ಮಾಡಿದ್ದಾರೆ.
ಈ ವರ್ಷದ ಏಷ್ಯಾಕಪ್ಗೆ ಅಡ್ಡಿ ಆತಂಕಗಳು ಆರಂಭದಿಂದಲೇ ಇದ್ದವು. ಪಾಕಿಸ್ತಾನ ಆಯೋಜಕ ರಾಷ್ಟ್ರವಾಗಿದ್ದರಿಂದ ಭಾರತ ಪ್ರಯಾಣಿಸುವುದಿಲ್ಲ ಎಂದು ಆರಂಭದಲ್ಲೇ ತಿಳಿಸಿತ್ತು. ಪಾಕಿಸ್ತಾನ ಈ ವಿಚಾರವಾಗಿ ಹಲವಾರು ಗೊಂದಲಗಳನ್ನು ಸೃಷ್ಟಿಸಿತ್ತು. ನಂತರ ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿತು. ಹೀಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ಏಷ್ಯಾಕಪ್ನ ಆಯೋಜಕ ರಾಷ್ಟ್ರಗಳಾದವು.
ಏಷ್ಯಾಕಪ್ಗೆ ಮಳೆ ಕಾಟ: ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯುವ ಅಷ್ಟೂ ದಿನವೂ ಮಳೆಯ ಮುನ್ಸೂಚನೆ ಇತ್ತು. ಅಲ್ಲದೇ ನಾಲ್ಕು ಪಂದ್ಯಗಳಿಗೆ ಮಳೆ ಬಂದು ಅಡ್ಡಿಪಡಿಸಿತ್ತು. ಪಲ್ಲೆಕೆಲೆಯಲ್ಲಿ ನಡೆದ ಭಾರತ - ಪಾಕಿಸ್ತಾನ ನಡುವಿನ ಲೀಗ್ ಹಂತ ಪಂದ್ಯ ಫಲಿತಾಂಶ ಕಾಣಲಿಲ್ಲ. ನಂತರ ಸೂಪರ್ ಫೋರ್ ಹಂತದ ಎಲ್ಲಾ ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ ಭಾನುವಾರ ಫೈನಲ್ ಪಂದ್ಯದವರೆಗೂ ಮಳೆಯ ಆತಂಕದಲ್ಲೇ ಮ್ಯಾಚ್ ನಡೆಸಲಾಯಿತು.
ಇಂಡೋ - ಪಾಕ್ ಪಂದ್ಯಕ್ಕೆ ಬಿಟ್ಟು ಬಿಡದೇ ಕಾಡಿದ ಮಳೆ:ಲೀಗ್ ಹಂತ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣಲಿಲ್ಲ. ಆದರೆ ಸೂಪರ್ ಫೋರ್ ಹಂತದಲ್ಲಿನ ಭಾರತ - ಪಾಕಿಸ್ತಾನ ಪಂದ್ಯಕ್ಕೂ ಮಳೆ ಕಾಡಿತು. ಭಾನುವಾರದ ಪಂದ್ಯಕ್ಕೆ ಮೀಸಲು ದಿನ ಇದ್ದ ಕಾರಣ ಮಾರನೇ ದಿನ ಮಳೆಯ ಕಾಟದ ನಡುವೆಯೂ ಭಾರತ ಗೆದ್ದಿತ್ತು. ದಿನವಿಡೀ ಮಳೆ ಸುರಿದರೂ ಮೈದಾನ ಹಾಳಾಗದಂತೆ ಸಿಬ್ಬಂದಿ ರಕ್ಷಿಸಿದ ರೀತಿ ನಿಜಕ್ಕೂ ಶ್ಲಾಘನಾರ್ಹ. ಮಳೆಗೆ ಇಡೀ ಮೈದಾನವನ್ನೇ ಮುಚ್ಚಿ ರಕ್ಷಿಸಿದ್ದರು. ಅಲ್ಲದೇ ಮೈದಾನ ಒಳಗಿಸಲು ಹೆಲೋಜನ್ ಲೈಟ್ ಮತ್ತು ಫ್ಯಾನ್ ಬಳಸಿದ್ದರು. ಈ ನಡೆಗೆ ದಿಗ್ಗಜ ಕ್ರಿಕೆಟಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.