ದುಬೈ: ವರ್ಷದ ಮೊದಲ ಮತ್ತು ಎರಡನೇ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ. ಸಿರಾಜ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಒಂಬತ್ತು ಮತ್ತು ಕಿವೀಸ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.
ಜಸ್ಪ್ರೀತ್ ಬುಮ್ರಾ ನಂತರ ಐಸಿಸಿ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಏಕದಿನದಲ್ಲಿ ಅಗ್ರಸ್ಥಾನ ಪಡೆದ ಬೌಲರ್ ಸಿರಾಜ್ ಆಗಿದ್ದಾರೆ. ಬುಮ್ರಾ ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಆಕರ್ಷಕ ಆಟದಿಂದ ಮೊದಲ ಸ್ಥಾನಕ್ಕೆ ತಲುಪಿದ್ದರು. ನಂತರ ನಿರಂತರ ಗಾಯದ ಸಮಸ್ಯೆಯಿಂದ ತಂಡದಿಂದ ಅವರು ಹೊರಗುಳಿದಿದ್ದರು.
ಬೌಲರ್‌ಗಳ ಶ್ರೇಯಾಂಕದಲ್ಲಿ ಸಿರಾಜ್ 729 ರೇಟಿಂಗ್ ಪಾಯಿಂಟ್‌ನಿಂದ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿದ್ದ ನ್ಯೂಜೆಲೆಂಡ್ ಆಟಗಾರ ಟ್ರೆಂಟ್ ಬೋಲ್ಟ್ ಮೂರನೇ ಶ್ರೇಯಾಂಕದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಜಸ್ಪಿತ್ ಬುಮ್ರಾ 24ನೇ ಸ್ಥಾನದಲ್ಲಿದ್ದಾರೆ. ಶಮಿ 11 ಸ್ಥಾನಗಳ ಏರಿಕೆ ಕಂಡು 32 ಸ್ಥಾನದಲ್ಲಿದ್ದಾರೆ.
2022 ಸಿರಾಜ್ ಗೋಲ್ಡನ್ ಇಯರ್: ಸಿರಾಜ್ ಮೂರು ವರ್ಷಗಳ ನಂತರ ಫೆಬ್ರವರಿಯಲ್ಲಿ ಏಕದಿನ ತಂಡಕ್ಕೆ ಮರಳಿದ್ದರು. ಅಂದಿನಿಂದ 21 ಪಂದ್ಯಗಳನ್ನು ಆಡಿರುವ ವೇಗಿ ಸಿರಾಜ್ 37 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ, ಸಿರಾಜ್ ಅವರು ತಮ್ಮ ಕೊನೆಯ 10 ಏಕದಿನ ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ಆದರೂ ಗಳಿಸಿದ್ದಾರೆ. ಅವರು ಸತತ ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡುತ್ತಾಬರುತ್ತಿದ್ದು, ಈ ವರ್ಷದ ಆರಂಭದಲ್ಲಿ ಲಂಕಾ ವಿರುದ್ಧ 9 ವಿಕೆಟ್ ಹಾಗೂ ಕಿವೀಸ್ ವಿರುದ್ಧ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ.