ನವದೆಹಲಿ: 'ಕೈಲಾಗದವನು ಮೈ ಪರಚಿಕೊಂಡ' ಎಂಬ ಗಾದೆ ಮಾತು ಪಾಕಿಸ್ತಾನದ ಮಾಜಿ ಆಟಗಾರ ಹಸನ್ ರಝಾಗೆ ಸೂಕ್ತವಾಗಿ ಹೊಂದುತ್ತದೆ. ಏಕೆಂದರೆ ವಿಶ್ವಕಪ್ನಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಟೀಮ್ ಇಂಡಿಯಾದ ಪ್ರದರ್ಶನವನ್ನು ಕಂಡ ರಾಝಾ ಅವರು ಇಂತಹ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಪಾಕಿಸ್ತಾನಿ ತಂಡ ಪ್ರದರ್ಶನ ನೀಡುವಲ್ಲಿ ಇರುವ ಸಮಸ್ಯೆಯ ಬಗ್ಗೆ ಚರ್ಚಿಸುವುದು ಬಿಟ್ಟು ಅಸಂಬದ್ಧ ಪ್ರಶ್ನೆಗಳನ್ನು ಮಾಡಿ ತಮ್ಮ ಮತ್ತು ಪಾಕಿಸ್ತಾನದ ಮರ್ಯಾದೆಯನ್ನು ಇನ್ನೂ ಕಳೆದುಕೊಳ್ಳುತ್ತಿದ್ದಾರೆ.
ಹಸನ್ ರಾಝಾ ಅವರ ಕೆಳ ಮಟ್ಟದ ಚಿಂತನೆಯ ಹೇಳಿಕೆಗೆವ ಟೀಮ್ ಇಂಡಿಯಾದ ಆಟಗಾರ ಮಹಮ್ಮದ್ ಶಮಿ ಟಾಂಗ್ ನೀಡಿದ್ದಾರೆ. ಅಲ್ಲದೇ ತಮ್ಮದೇ ದೇಶದ ಆಟಗಾರನ ಮಾತಿಗೆ ಸ್ವಲ್ಪ ಕಿವಿಗೊಡಿ ಎಂದು ಉಪದೇಶವನ್ನು ಮಾಡಿದ್ದಾರೆ. ನಿಮ್ಮ ತಂಡದ ಆಟಗಾರರ ಮೇಲೆ ನೀವು ನಂಬಿಕೆಯನ್ನು ಇಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟರ್ಗಳು ಎದುರಾಳಿಗಳ ಬೌಲಿಂಗ್ ಅನ್ನು ಯಶಸ್ವಿಯಾಗಿ ಎದುರಿಸಿದರೆ, ಎದುರಾಳಿಗಳ ಮೇಲೆ ಕಠಿಣ ಬೌಲಿಂಗ್ ದಾಳಿಯನ್ನು ಮಾಡಿ ಅಲ್ಪಮೊತ್ತಕ್ಕೆ ಕಟ್ಟಿಹಾಕುತ್ತಿದ್ದಾರೆ. ಟೀಮ್ ಇಂಡಿಯಾದ ಬೌಲಿಂಗ್ ವಿರುದ್ಧ ವಿಶ್ವಕಪ್ನಲ್ಲಿ ಇದುವರೆಗೆ ಯಾವುದೇ ತಂಡ 300ರ ಗಡಿ ತಲುಪಿಲ್ಲ.
ರಾಝಾ ಟೀಕೆ:ಈ ರೀತಿ ಬೌಲಿಂಗ್ ಕಂಡ ಪಾಕಿಸ್ತಾನದ ಆಟಗಾರ ಹಸನ್ ರಾಝಾ, ಭಾರತ ತಂಡಕ್ಕೆ ವಿಶೇಷ ಬಾಲ್ ನೀಡಲಾಗುತ್ತದೆ. ಅದಕ್ಕಾಗಿ ಅವರ ಬೌಲರ್ಗಳು ಅಷ್ಟು ಪರಿಣಾಮಕಾರಿ ಬೌಲಿಂಗ್ ಮಾಡುತ್ತಾರೆ. ಅವರ ಬ್ಯಾಟಿಂಗ್ ವೇಳೆ ತಿರುಗದ, ಸ್ವಿಂಗ್ ಆಗದ ಬೌಲ್ಗಳು, ಎದುರಾಳಿ ತಂಡ ಬ್ಯಾಟಿಂಗ್ ಮಾಡುವಾಗ ಮಾತ್ರ ಹೇಗೆ ಅಷ್ಟೊಂದು ಸ್ಪಿನ್, ಸ್ವಿಂಗ್ ಆಗುತ್ತದೆ. ಈ ಬಗ್ಗೆ ತನಿಖೆ ನಡೆಸ ಬೇಕು ಎಂದು ಹೇಳಿದ್ದರು.