ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ತಂಡಕ್ಕೆ ಸೇರಿದ್ದಾರೆ. ಬೆನ್ನುನೋವಿನ ಕಾರಣದಿಂದಾಗಿ ಬುಮ್ರಾ ಈ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ಪಿಚ್ ಸೀಮ್ ಮತ್ತು ಬೌನ್ಸ್ ಆಗಿರುವುದು ಶಮಿಗೆ ಅವಕಾಶ ಸಿಗಲು ಕಾರಣ ಎನ್ನಲಾಗುತ್ತಿದೆ. ವಿಶ್ವಕಪ್ ತಂಡದಲ್ಲಿ ಶಮಿ ಸೇರ್ಪಡೆಯನ್ನು ಬಿಸಿಸಿಐ ಶುಕ್ರವಾರ ಖಚಿತಪಡಿಸಿದೆ.
ಟಿ20 ವಿಶ್ವಕಪ್ 2022ಗೆ ಬುಮ್ರಾ ಬದಲಿಗೆ ಶಮಿ ಫಿಕ್ಸ್ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ಗೆ ಮುನ್ನ ಗಾಯಗೊಂಡಿದ್ದರು. ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿತ್ತು. ಈ ಕಾರಣಕ್ಕಾಗಿ ಬುಮ್ರಾ ಬದಲಿಗೆ ಶಮಿ ಹೆಸರನ್ನು ಘೋಷಿಸಲಾಗಿದೆ.
ಮೊಹಮ್ಮದ್ ಶಮಿ ಅಲ್ಲದೇ, ಮೊಹಮ್ಮದ್ ಸಿರಾಜ್ ಕೂಡ ವಿಶ್ವಕಪ್‌ಗಾಗಿ ಟೀಂ ಇಂಡಿಯಾದಲ್ಲಿ ಸೇರ್ಪಡೆಗೊಂಡಿದ್ದಾರೆ. ಆದಾಗ್ಯೂ, ಅವರು ಮೀಸಲು ಆಟಗಾರನಾಗಿ ಉಳಿಯುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸಿರಾಜ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಡೆತ್ ಓವರ್ನಲ್ಲಿ ಸಿರಾಜ್ ವಿರುದ್ಧ ರನ್ ಗಳಿಸುವುದು ಬ್ಯಾಟ್ಸ್ಮನ್ಗಳಿಗೆ ಕಷ್ಟವಾಗುತ್ತಿರುವುದರಿಂದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟ:ಏಷ್ಯಾಕಪ್‌ನಿಂದಲೇ ಭಾರತ ತಂಡ ಡೆತ್ ಓವರ್‌ಗಳಲ್ಲಿ ಅತ್ಯಂತ ಕಳಪೆ ಬೌಲಿಂಗ್ ಮಾಡುತ್ತಿದೆ. ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ 18 ಮತ್ತು 19ನೇ ಓವರ್‌ಗಳಲ್ಲಿ ದುಬಾರಿ ಎನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬುಮ್ರಾ ಆಗಮನದಿಂದ ತಂಡದ ಈ ಸಮಸ್ಯೆಗೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದ ಈ ಸ್ಟಾರ್ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ಆಟಗಾರ ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಜಡೇಜಾ ನಂತರ ಹೂಡಾ ಮತ್ತು ಬುಮ್ರಾ ತಂಡದಿಂದ ಔಟ್:ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದಾಗಿನಿಂದ ಟೀಮ್ ಇಂಡಿಯಾದ ಟೆನ್ಷನ್ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮೊದಲಿಗೆ ರವೀಂದ್ರ ಜಡೇಜಾ ಅವರು ಗಾಯದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ನಂತರ ದೀಪಕ್ ಹೂಡಾ ಕೂಡ ಗಾಯಗೊಂಡರು, ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಿಂದ ಹೊರಗುಳಿದಿದ್ದರು. ಆದರೆ, ಈಗ ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿರುವುದು ಕಂಡು ಬರುತ್ತಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಿಂದ ವಿಶ್ವಕಪ್‌ನಲ್ಲಿ ಭಾರತದ ಸಂಕಷ್ಟ ಹೆಚ್ಚಾಗಿದೆ. ಮೊಹಮ್ಮದ್ ಶಮಿ ಈ ವರ್ಷ ಗುಜರಾತ್ ಪರ ಐಪಿಎಲ್ ಆಡಿದ್ದರು. ಅವರು 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.
2021ರ ನಂತರ ಟಿ20 ಪಂದ್ಯಗಳನ್ನು ಆಡದ ಶಮಿ: ಮೊಹಮ್ಮದ್ ಶಮಿ ಕಳೆದ ವರ್ಷ ನಮೀಬಿಯಾ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ವರ್ಷ ಐಪಿಎಲ್‌ನಲ್ಲಿ ಈ ಆಟಗಾರ ಅದ್ಬುತ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ಕೊಂಡೊಯ್ದು ಜಯವನ್ನೂ ಗಳಿಸಿದ್ದರು. ಈಗ ಅವರು ವಿಶ್ವಕಪ್‌ನಲ್ಲಿ ತಂಡಕ್ಕೆ ಎಷ್ಟು ಲಾಭದಾಯಕವೆಂದು ಸಾಬೀತುಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ನಾಳೆಯಿಂದ ಟಿ20 ವಿಶ್ವಕಪ್ 2022 ಆರಂಭ: ಶಮಿ ಅಲ್ಲದೇ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. T20 ವರ್ಲ್ಡ್ 2022 ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಭಾರತ ತಂಡವು ಈ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಅಕ್ಟೋಬರ್ 23 ರಂದು ಆಡಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಓದಿ:ಟಿ 20 ವಿಶ್ವಕಪ್ ತಂಡ ಸೇರಲಿರುವ ಶಮಿ, ಸಿರಾಜ್ - ಶಾರ್ದೂಲ್