ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸಿನ್ ಜಹಾನ್ ಅವರು ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಕೋಲ್ಕತ್ತಾದ ಕೆಳ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಶಮಿಯ ಹಿರಿಯ ಸಹೋದರ ಮೊಹಮ್ಮದ್ ಹಸಿಬ್‌ಗೂ ಇದೇ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಮಂಗಳವಾರ, ಇಬ್ಬರು ಸಹೋದರರು ಕೆಳ ನ್ಯಾಯಾಲಯದ ಮುಂದೆ ಹಾಜರಾದರು. ಅಲ್ಲಿ ಅವರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಕೋರ್ಟ್ ಅಂತಿಮವಾಗಿ ಜಾಮೀನು ನೀಡಿದೆ.
ಮಾರ್ಚ್ 2018 ರಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯ ವಿಚ್ಛೇದಿತ ಪತ್ನಿಯಿಂದ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಶಮಿಯ 'ವಿವಾಹಯೇತರ' ಸಂಬಂಧಗಳ ವಿರುದ್ಧ ಪ್ರತಿಭಟಿಸಿದ ನಂತರ ಶಮಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಶಮಿ ಮತ್ತು ಆತನ ಅಣ್ಣನನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದು, ಇಬ್ಬರ ವಿರುದ್ಧ ಬಂಧನ ವಾರೆಂಟ್ ಕೂಡ ಹೊರಡಿಸಿದ್ದಾರೆ. ಆದರೆ, ಕೋಲ್ಕತ್ತಾದ ಕೆಳ ನ್ಯಾಯಾಲಯವು ಆ ವಾರೆಂಟ್‌ಗೆ ತಡೆ ನೀಡಿತ್ತು. ನಂತರ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಹಾನ್ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ನಂತರ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು, ಅದು ಇತ್ತೀಚೆಗೆ ಅದೇ ಕೆಳ ನ್ಯಾಯಾಲಯಕ್ಕೆ ವಿಷಯವನ್ನು ಮರುನಿರ್ದೇಶಿಸಿತು. ಪ್ರಕರಣದ ಎಲ್ಲಾ ಕಕ್ಷಿದಾರರ ಸಾಕ್ಷ್ಯ ಆಲಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬರುವಂತೆ ಸೂಚಿಸಿತು. ಅದರಂತೆ, ಕೆಳ ನ್ಯಾಯಾಲಯದಲ್ಲಿ ಪ್ರಕರಣದ ಹೊಸ ವಿಚಾರಣೆ ಪ್ರಾರಂಭವಾಯಿತು. ಅಂತಿಮವಾಗಿ ಮಂಗಳವಾರ ಈ ವಿಷಯದಲ್ಲಿ ಮೊಹಮ್ಮದ್ ಶಮಿಗೆ ಜಾಮೀನು ನೀಡಲಾಯಿತು. ಈ ವರ್ಷದ ಜನವರಿಯಲ್ಲಿ, ನ್ಯಾಯಾಲಯವು ಜಹಾನ್‌ಗೆ ಮಾಸಿಕ 1.30 ಲಕ್ಷ ರೂಪಾಯಿ ಜೀವನಾಂಶವನ್ನು ನೀಡುವಂತೆ ಆದೇಶಿಸಿತ್ತು. ಇದರಲ್ಲಿ ವೈಯಕ್ತಿಕ ಜೀವನಾಂಶ 50,000 ಮತ್ತು ಇತರೆಗೆ 80,000 ರೂ.ವನ್ನು ನೀಡುವಂತೆ ಹೇಳಲಾಗಿತ್ತು.
ಮೊಹಮ್ಮದ್ ಶಮಿ ಭಾರತದ ಎ ಗ್ರೇಡ್ ಆಟಗಾರ ಆಗಿದ್ದಾರೆ. ರಾಷ್ಟ್ರೀಯ ಗುತ್ತಿಗೆಯ ಆಧಾರದಲ್ಲಿ ಅವರಿಗೆ ವಾರ್ಷಿಕವಾಗಿ 5 ಕೋಟಿ ರೂಪಾಯಿ ನೀಡಲಾಗುತ್ತದೆ. ಅಲ್ಲದೇ ಅವರು ಪ್ರತೀ ಪಂದ್ಯಕ್ಕೂ ಸಂಭಾವನೆ ಪಡೆಯುತ್ತಾರೆ. ಶಮಿ ಪ್ರಸ್ತುತ ಬಿಸಿಸಿಐನ ಸ್ಟಾರ್ ಆಟಗಾರರಾಗಿದ್ದಾರೆ. ಏಷ್ಯಾ ಕಪ್ ನಂತರ ಆಸ್ಟ್ರೇಲಿಯಾ ಸರಣಿ ಮತ್ತು ವಿಶ್ವಕಪ್ ತಂಡದಲ್ಲೂ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಸಂಜು ಸ್ಥಾನದಲ್ಲಿ ನಾನಿದ್ದರೆ.. ಆಸ್ಟ್ರೇಲಿಯಾ ಸರಣಿಗೆ ಸ್ಯಾಮ್ಸನ್ ಆಯ್ಕೆಯ ಬಗ್ಗೆ ಇರ್ಫಾನ್ ಪ್ರತಿಕ್ರಿಯೆ