ಸೌತಾಂಪ್ಟನ್: ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 249 ರನ್ಗಳಿಗೆ ಆಲೌಟ್ ಆಗಿದೆ. ಆದರೂ ಟಿಮ್ ಸೌಥಿ ಅವರ ಸಾಹಸದಿಂದ 32 ರನ್ಗಳ ಅಲ್ಪ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದೆ.
101 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಇಂದು ಬ್ಯಾಟಿಂಗ್ ಮುಂದುವರಿಸಿತು. ಖಾತೆ ತೆರೆಯದೇ ನೈಟ್ ವಾಚ್ಮನ್ ಆಗಿದ್ದ ರಾಸ್ ಟೇಲರ್ 11 ರನ್ಗಳಿಸಿ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹೆನ್ರಿ ನಿಕೋಲ್ಸ್ 7, ಬಿಜೆ ವಾಟ್ಲಿಂಗ್ 1 ಗ್ರ್ಯಾಂಡ್ಹೋಮ್ 13 ರನ್ಗಳಿಸಿ ಔಟಾದರು.
162ಕ್ಕೆ 6 ವಿಕೆಟ್ ಕಳೆದುಕೊಂಡು 200 ಗಡಿ ದಾಟುವುದು ಅನುಮಾನ ಎನ್ನುವ ಸಂದರ್ಭದಲ್ಲಿ ನಾಯಕ ವಿಲಿಯಮ್ಸನ್ ಜೊತೆಗೂಡಿದ ಜೆಮೀಸನ್(21) 30 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇದರ ಬೆನ್ನಲ್ಲೇ 177 ಎಸೆತಗಳಲ್ಲಿ 6 ಬೌಂಡರಿ ಸಹಿತ 49 ರನ್ಗಳಿಸಿದ್ದ ಕೇನ್ ವಿಲಿಯಮ್ಸನ್ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಆದರೆ ಕೊನೆಯಲ್ಲಿ ಅಬ್ಬರಿಸಿದ ಟಿಮ್ ಸೌಥಿ 46 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 30 ರನ್ಗಳಿಸಿ 32 ರನ್ಗಳ ಮುನ್ನಡೆಗೆ ನೆರವಾದರು. ಭಾರತದ ಪರ ಇಶಾಂತ್ ಶರ್ಮಾ 48ಕ್ಕೆ3 , ಮೊಹಮ್ಮದ್ ಶಮಿ 76ಕ್ಕೆ4, ಅಶ್ವಿನ್ 28ಕ್ಕೆ 2 ಮತ್ತು ಜಡೇಜಾ 20ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ:WTC Final : ಶಮಿ ಈ ಸಾಧನೆ ಮಾಡಿದ ಭಾರತದ ಪರ ಮೊದಲ ಬೌಲರ್