ಧರ್ಮಶಾಲಾ (ಹಿಮಾಚಲ ಪ್ರದೇಶ): 2023ರ ವಿಶ್ವಕಪ್ನಲ್ಲಿ ಭಾರತ ತಂಡ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ನಡೆದ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು 300 ರನ್‌ಗಳ ಗಡಿ ದಾಟದಂತೆ ನಿಯಂತ್ರಿಸಿದೆ. ಅಲ್ಲದೇ ಯಾವುದೇ ತಂಡದ ಬ್ಯಾಟರ್ಗಳೂ ಶತಕ ದಾಖಲಿಸಿರಲಿಲ್ಲ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಡೇರಿಲ್ ಮಿಚೆಲ್ ಶತಕ ದಾಖಲಿಸುವ ಮೂಲಕ ಈ ರೆಕಾರ್ಡ್ ಬ್ರೇಕ್ ಮಾಡಿದರು. ಆದರೆ ಅವರ ಶತಕದಾಟದ ಹೊರತಾಗಿಯೂ ತಂಡ 273 ರನ್‌ಗಳಿಗೆ ಸರ್ವಪತನ ಕಂಡಿತು. ಡೆತ್ ಓವರ್ಗಳಲ್ಲಿ ಶಮಿ ವಿಕೆಟ್‌ಗಳನ್ನು ಉರುಳಿಸಿ ಆಲ್ಔಟ್ ಮಾಡಿದರು.
ವಿಶ್ವಕಪ್ನಲ್ಲಿ ಎರಡನೇ 5 ವಿಕೆಟ್ ಸಾಧನೆ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಮಿ 10 ಓವರ್ ಮಾಡಿ 54 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದರು. ಇದರಿಂದ ವಿಶ್ವಕಪ್ನಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು. ವಿಶ್ವಕಪ್ನಲ್ಲಿ 5 ವಿಕೆಟ್ ಪಡೆದ ಭಾರತೀಯರಲ್ಲಿ ಇವರೇ ಮೊದಲಿಗ. ಕಪಿಲ್ ದೇವ್, ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್, ಆಶಿಶ್ ನೆಹ್ರಾ ಮತ್ತು ಯುವರಾಜ್ ಸಿಂಗ್ ಒಂದು ಬಾರಿ ಪಂಚ ವಿಕೆಟ್ ಪಡೆದ ಭಾರತೀಯ ಬೌಲರ್ಗಳಾಗಿದ್ದಾರೆ.
ಶಮಿ ಇದರೊಂದಿಗೆ ವಿಶ್ವಕಪ್ನಲ್ಲಿ 5 ಬಾರಿ ನಾಲ್ಕಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆಗೈದ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಪಾತ್ರರಾದರು. ಅಲ್ಲದೇ ವಿಶ್ವ ಮಟ್ಟದಲ್ಲಿ ಮಿಚೆಲ್ ಸ್ಟಾರ್ಕ್ 6 ಬಾರಿ 4ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರೆ, ಇಮ್ರಾನ್ ತಾಹಿರ್ ಹಾಗೂ ಶಮಿ 5 ಸಲ ಈ ಸಾಧನೆ ಮಾಡಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.