ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಮೈದಾನದ ಹೊರಗೆ ವಾಕ್ಸಮರ, ಟೀಕೆ ಸಹಜವಾಗಿರುತ್ತವೆ. ಏಷ್ಯಾ ಟೂರ್ನಿಯಲ್ಲಿ ನಾಳೆ ನಡೆಯುವ ಸೂಪರ್ 4 ಹಂತದ ಪಂದ್ಯಕ್ಕೂ ಮೊದಲು ಪಾಕಿಸ್ತಾನದ ಮಾಜಿ ನಾಯಕ ಮಹಮದ್ ಹಫೀಜ್ ಭಾರತವನ್ನು ಕೆಣಕಿದ್ದಾರೆ. ಇದರಿಂದ ಹಫೀಜ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದಾರೆ.
ಹಫೀಜ್ ಭಾರತದ ಬಗ್ಗೆ ಏನಂದರು:ಏಷ್ಯಾ ಕಪ್ನಲ್ಲಿ ಭಾರತದ ಎದುರು ಮೊದಲ ಪಂದ್ಯದಲ್ಲೇ ಸೋತು ಅವಮಾನಕ್ಕೀಡಾಗಿರುವ ಪಾಕಿಸ್ತಾನ ತಂಡ ಅವರ ದೇಶದಲ್ಲಿ ಟೀಕೆಗೂ ಒಳಗಾಗಿದೆ. ಈ ಬಗ್ಗೆ ಟೀವಿ ಚರ್ಚೆಯಲ್ಲಿ ಭಾಗವಹಿಸಿದ್ದ ತಂಡದ ಮಾಜಿ ನಾಯಕ ಮಹಮದ್ ಹಫೀಜ್ ಭಾರತದ ಕ್ರಿಕೆಟ್ ಆಯೋಜನೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಹಲವು ಕ್ರಿಕೆಟ್ ಟೂರ್ನಿಗಳನ್ನು ಆಯೋಜನೆ ಮಾಡುತ್ತಿರುವುದು ಭಾರತ ಕ್ರಿಕೆಟ್ನ ಗುಣಮಟ್ಟದಿಂದಲೋ ಅಥವಾ ಹಣಕ್ಕಾಗಿಯೋ ಎಂದು ಟಿವಿ ನಿರೂಪಕ ಪ್ರಶ್ನಿಸುತ್ತಾನೆ. ಇದಕ್ಕುತ್ತರಿಸಿದ ಹಫೀಜ್ "ಹಣಕ್ಕಾಗಿ ಮಾತ್ರ" ಎಂದಿದ್ದಾರೆ.
ಸಮಾಜದಲ್ಲಿ ಹೆಚ್ಚು ಗಳಿಸುವವನು ಮಾತ್ರ ಎಲ್ಲರ ಪ್ರೀತಿಪಾತ್ರನಾಗುತ್ತಾನೆ. ಹೆಚ್ಚು ಲಾಡ್ಲಾ (ಮುದ್ದು) ಪಡೆಯುತ್ತಾನೆ ಎಂಬುದು ನನಗೆ ಖಚಿತವಾಗಿ ತಿಳಿದಿದೆ. ಭಾರತ ಹಣ ಗಳಿಸುವ ದೇಶವಾಗಿದೆ. ಆದ್ದರಿಂದ ಬಿಸಿಸಿಐ ವಿಶ್ವಾದ್ಯಂತ ನಡೆಯುವ ದ್ವಿಪಕ್ಷೀಯ ಸರಣಿಗಳಲ್ಲಿ ಅವರು ಪ್ರಾಯೋಜಕತ್ವ ಪಡೆಯುತ್ತಾರೆ. ಇದರಿಂದ ಅದು ಜಾಕ್‌ಪಾಟ್ ಪಡೆಯುತ್ತದೆ. ಇದು ಸತ್ಯ ಎಂದು ಹಫೀಜ್ ಹೇಳಿದ್ದಾರೆ.