ಇಸ್ಲಾಮಾಬಾದ್:ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, 18 ವರ್ಷಗಳ ಅವರ ವೃತ್ತಿಜೀವನ ಕೊನೆಗೊಂಡಿದೆ. ಆದರೆ, ಟಿ-20 ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ.
2003ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಹಫೀಜ್ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. ಕಳೆದ ನವೆಂಬರ್‌ನಲ್ಲಿ ದುಬೈನಲ್ಲಿ ನಡೆದ T-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ.
2020ರ T -20 ವಿಶ್ವಕಪ್ ತಮ್ಮ ಕೊನೆಯ ಟೂರ್ನಿ ಎಂದು ಅವರು ಈ ಹಿಂದೆಯೇ ತಿಳಿಸಿದ್ದರು. ಆದರೆ, ಕೋವಿಡ್ ಕಾರಣದಿಂದಾಗಿ ಪಂದ್ಯಾವಳಿ ಮುಂದೂಡಲ್ಪಟ್ಟಿತ್ತು. ಹಫೀಜ್ 55 ಟೆಸ್ಟ್, 218 ಏಕದಿನ ಹಾಗೂ 119 ಟಿ-20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 12,780 ರನ್ ಬಾರಿಸಿದ್ದಲ್ಲದೇ, 253 ವಿಕೆಟ್ ಕಬಳಿಸಿದ್ದಾರೆ.
'ಇಂದು ನಾನು ಹೆಮ್ಮೆ ಮತ್ತು ತೃಪ್ತಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆ. ವಾಸ್ತವವಾಗಿ, ನಾನು ಆರಂಭಿಕ ದಿನಗಳಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸು ಸಾಧಿಸಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನನಗೆ ನೆರವಾದ ಎಲ್ಲ ಸಹ ಕ್ರಿಕೆಟಿಗರು, ನಾಯಕರು, ಸಹಾಯಕ ಸಿಬ್ಬಂದಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಹಫೀಜ್ ಡಿಸೆಂಬರ್ 2018ರಲ್ಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. 2019ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಲಾರ್ಡ್ಸ್‌ನಲ್ಲಿ ಆಡಿದ ಪಂದ್ಯದ ಬಳಿಕೆ ಅವರು ಏಕದಿನ ತಂಡದಿಂದ ಕಡೆಗಣಿಸಲ್ಪಟ್ಟಿದ್ದರು. ಟಿ-20ಗಳಲ್ಲಿ ನಾಯಕನಾಗಿ ಅವರು 29 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದು, 11 ಸೋಲು ಹಾಗೂ 18 ಗೆಲುವು ಕಂಡಿದ್ದಾರೆ.
ಹಫೀಜ್ ನಿವೃತ್ತಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ:Pro Kabaddi: ಪವನ್, ಬುಲ್ಸ್ ಆರ್ಭಟಕ್ಕೆ ಪುಣೇರಿ ಪಲ್ಟನ್ಸ್ ಪಲ್ಟಿ.. ಅಗ್ರಸ್ಥಾನಕ್ಕೇರಿದ ಬೆಂಗಳೂರು