ನವದೆಹಲಿ: ಪಾಕಿಸ್ತಾನ ತಂಡ 2023ರ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ನಾಯಕತ್ವ, ಕೋಚ್ ಮತ್ತು ನಿರ್ದೇಶಕ ಹುದ್ದೆಗಳಲ್ಲಿ ಕೆಲ ಬದಲಾವಣೆಗಳು ಆಗಿದೆ. ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಹಾಗೇ ತಂಡದ ನಾಯಕ ಬಾಬರ್ ಅಜಮ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರೆ, ಪ್ರಮುಖ ಕೋಚ್, ನಿರ್ದೇಶಕ ಮಿಕ್ಕಿ ಆರ್ಥರ್ ಜಾಗಕ್ಕೆ ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೇಮಿಸಿದೆ. ಮಿಕ್ಕಿ ಆರ್ಥರ್ ಹುದ್ದೆ ಏನಾಗಿರಲಿದೆ ಎಂಬುದನ್ನು ಪಿಸಿಬಿ ತಿಳಿಸಿಲ್ಲ.
ಪಾಕಿಸ್ತಾನ ತಂಡ ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಪಾಕಿಸ್ತಾನದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿ ಆಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ನಿರ್ದೇಶಕ ಮತ್ತು ಮುಖ್ಯ ಕೋಚ್ ಹುದ್ದೆಯನ್ನು ವಿಲೀನಗೊಳಿಸಲಿದೆ ಎಂದು ಹೇಳಲಾಗಿದೆ. ಹಫೀಜ್ ಆಸ್ಟ್ರೇಲಿಯಾದಲ್ಲಿ ಮುಂಬರುವ ಮೂರು ಟೆಸ್ಟ್ ಪಂದ್ಯಗಳು ಮತ್ತು ನ್ಯೂಜಿಲೆಂಡ್‌ನಲ್ಲಿ ಕ್ರಮವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಯಲಿರುವ ಐದು ಟಿ -20ಗಳಲ್ಲಿ ಎರಡೂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಹಫೀಜ್ ಇತ್ತೀಚೆಗೆ ಪಿಸಿಬಿ ಕ್ರಿಕೆಟ್ ತಾಂತ್ರಿಕ ಸಮಿತಿಯ ಭಾಗವಾಗಿದ್ದರು. ಮಾಜಿ ಆಲ್‌ರೌಂಡರ್ 2017 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಪಾಕಿಸ್ತಾನ ಪುರುಷರ ತಂಡದ ಸದಸ್ಯರಾಗಿದ್ದರು. ಪಿಸಿಬಿ ಪಾಕಿಸ್ತಾನದ ಕೋಚಿಂಗ್ ಸಿಬ್ಬಂದಿಯ ಕೆಲ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ತರಬೇತುದಾರರನ್ನು ಪಿಸಿಬಿ ಮುಂದುವರೆಸಿದೆ, ಆದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಸರಣಿಗಳಿಗೆ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಸರಿಯಾದ ಸಮಯದಲ್ಲಿ ಘೋಷಿಸುತ್ತದೆ ಎಂದು ವರದಿಯಾಗಿದೆ.