ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೋಯಿನ್ ಅಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಿಂದ ಅಲಿ ನಿವೃತ್ತಿ ಪಡೆದಿರುವ ಬಗ್ಗೆ ಇಂದು (ಸೋಮವಾರ 27) ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB News) ದೃಢಪಡಿಸಿದೆ.
ಮುಂಬರುವ ಐಸಿಸಿ ವಿಶ್ವ ಟಿ-20ಗೆ ಹೆಚ್ಚಿನ ಗಮನ ಕೊಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮತ್ತು ನಾಯಕ ಜೋ ರೂಟ್ಗೆ ಕಳೆದ ಒಂದು ವಾರದ ಹಿಂದೆಯೇ ಈ ವಿಷಯವನ್ನು ಅಲಿ ತಿಳಿಸಿದ್ದರು.
ಪ್ರಸ್ತುತ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ 34 ವರ್ಷದ ಮೋಯಿನ್ ಅಲಿ, 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2914 ರನ್ ಗಳಿಸಿರುವ ಅವರು ಟೆಸ್ಟ್ನಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ.
2014ರಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೋಯಿನ್ ಅಲಿ, 5 ಟೆಸ್ಟ್ನಲ್ಲಿ ಶತಕ ಸಿಡಿಸಿದ್ದಾರೆ. 195 ವಿಕೆಟ್‌ಗಳನ್ನು ಉರುಳಿಸಿ ತಂಡವನ್ನು ಸೋಲಿನ ಡವಡೆಯಿಂದ ಪಾರು ಮಾಡಿದ್ದಾರೆ. ಇತ್ತೀಚೆಗೆ ನಡೆದ ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರನ್ ಮಿಷನ್ ವಿರಾಟ್ ಕೊಹ್ಲಿ ಅವರನ್ನು ಸೊನ್ನೆಗೆ ಔಟ್ ಮಾಡುವ ಮೂಲಕ ವಿಶಿಷ್ಠ ದಾಖಲೆ ಬರೆದಿದ್ದಾರೆ.