ಬಾರ್ಬಡೋಸ್: ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೆಜಲ್ವುಡ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಅತಿಥೇಯ ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 133 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ನಿಗದಿತ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು. ಪದಾರ್ಪಣೆ ಆಟಗಾರ ಪಿಲಿಪ್ಪೆ 39, ಬೆನ್ ಮೆಕ್ಡರ್ಮೊಟ್ 28, ಅಲೆಕ್ಸ್ ಕ್ಯಾರಿ 67 ಆಶ್ಟನ್ ಟರ್ನರ್ 49 ರನ್ ಗಳಿಸಿದ್ದರು.
ವಿಂಡೀಸ್ ಪರ ಹೇಡನ್ ವಾಲ್ಶ್ 39ಕ್ಕೆ 5, ಅಲ್ಜಾರಿ ಜೋಸೆಫ್ 40ಕ್ಕೆ 2, ಅಕೀಲ್ ಹುಸೇನ್ 50ಕ್ಕೆ 2 ವಿಕೆಟ್ ಪಡೆದಿದ್ದರು.
253 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಸ್ಟಾರ್ಕ್ ಮತ್ತು ಹೆಜಲ್ವುಡ್ ದಾಳಿಗೆ ತತ್ತರಿಸಿ 26.2 ಓವರ್ಗಳಲ್ಲಿ ಕೇವಲ 123 ರನ್ಗಳಿಗೆ ಆಲೌಟ್ ಆಗುವ ಮೂಲಕ 133ರನ್ಗಳ ಸೋಲು ಕಂಡಿತು.