ಚೆನ್ನೈ, ತಮಿಳುನಾಡು:ಟೀಂ ಇಂಡಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಇನಿಂಗ್ಸ್‌ನ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಭಾರತದ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (0) ಅವರನ್ನು ಔಟ್ ಮಾಡುವ ಮೂಲಕ ಮಿಚೆಲ್ ಸ್ಟಾರ್ಕ್ ಈ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಇನಿಂಗ್ಸ್ ನ ಮೊದಲ ಓವರ್ ನ ನಾಲ್ಕನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಔಟ್ ಗೋಯಿಂಗ್ ಬಾಲ್ಗೆ ಇಶಾನ್ ಕಿಶನ್ ಔಟಾದರು. ಮಿಚೆಲ್ ಸ್ಟಾರ್ಕ್ ಅವರ ಎಸೆತ ಇಶಾನ್ ಕಿಶನ್ ಅವರ ಬ್ಯಾಟ್ನ ಅಂಚಗೆ ಬಡಿದು ಕ್ಯಾಮರೂನ್ ಗ್ರೀನ್ ಅವರ ಕೈ ಸೇರಿತು. ಇದರೊಂದಿಗೆ ಮಿಚೆಲ್ ಸ್ಟಾರ್ಕ್ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಲಸಿತ್ ಮಾಲಿಂಗ ಅವರ ವಿಶ್ವ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಮುರಿದಿದ್ದಾರೆ. ಮಿಚೆಲ್ ಸ್ಟಾರ್ಕ್ 19ನೇ ಇನ್ನಿಂಗ್ಸ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಲಸಿತ್ ಮಾಲಿಂಗ ವಿಶ್ವಕಪ್‌ನಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದರು. ಮಿಚೆಲ್ ಸ್ಟಾರ್ಕ್ 2019 ರ ವಿಶ್ವಕಪ್‌ನಲ್ಲಿ ಗರಿಷ್ಠ 27 ವಿಕೆಟ್‌ಗಳನ್ನು ಪಡೆದರು. 2023 ರ ವಿಶ್ವಕಪ್‌ನಲ್ಲಿ ಮಿಚೆಲ್ ಸ್ಟಾರ್ಕ್‌ನಿಂದ ಇದೇ ರೀತಿಯ ಬಿರುಸಿನ ಪ್ರದರ್ಶನವನ್ನು ಆಸ್ಟ್ರೇಲಿಯಾ ನಿರೀಕ್ಷಿಸುತ್ತದೆ.
:- ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್ ಪಡೆದ ಆಟಗಾರರು
* ಮಿಚೆಲ್ ಸ್ಟಾರ್ಕ್ - 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಲಸಿತ್ ಮಾಲಿಂಗ - 25 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಗ್ಲೆನ್ ಮೆಕ್‌ಗ್ರಾತ್ - 30 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ಮುತ್ತಯ್ಯ ಮುರಳೀಧರನ್ - 30 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
* ವಾಸಿಂ ಅಕ್ರಮ್- 33 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಜಯ: ಭಾನುವಾರ ಇಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಮಾಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ತಂಡದ ಪರ ಸ್ಟೀವ್ ಸ್ಮಿತ್ (46) ಮತ್ತು ಡೇವಿಡ್ ವಾರ್ನರ್ (41) ಗರಿಷ್ಠ ರನ್ ಗಳಿಸಿದರು.
ಆಸ್ಟ್ರೇಲಿಯಾದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಅತ್ಯಂತ ಕಳಪೆ ಆರಂಭ ಪಡೆಯಿತು. ತಂಡ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಖಾತೆ ತೆರೆಯದೇ ಪೆವಿಲಿಯನ್ ಹಾದಿ ಹಿಡಿದಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರಮೇಣ ಇನಿಂಗ್ಸ್ ಮುನ್ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಆದರೆ, ಗೆಲುವಿಗೆ ಕೆಲವೇ ರನ್‌ಗಳ ಮೊದಲು ವಿರಾಟ್ ಔಟಾದರು. ಕೊನೆಗೆ ಕೆಎಲ್ ರಾಹುಲ್ ಅವರ ಅಮೋಘ ಆಟದಿಂದ ಭಾರತ ಗೆಲುವಿನ ದಡ ಸೇರಿತು.
ತಂಡದ ಪರ ರವೀಂದ್ರ ಜಡೇಜಾ (28ಕ್ಕೆ 3 ವಿಕೆಟ್), ಕುಲದೀಪ್ ಯಾದವ್ (42ಕ್ಕೆ 2 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (34ಕ್ಕೆ ಒಂದು ವಿಕೆಟ್) ಅವರ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿತು. ಭಾರತದ ವೇಗದ ಬೌಲರ್‌ಗಳೂ ತಮ್ಮ ಜಾದೂ ಪ್ರದರ್ಶಿಸಿದರು. ಜಸ್ಪ್ರೀತ್ ಬುಮ್ರಾ 35 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಓದಿ:Cricket World Cup 2023: ಕೆಎಲ್ ರಾಹುಲ್ ಶತಕ ವಂಚಿತರಾಗಲು ಪಾಂಡ್ಯಾ ಸಿಕ್ಸ್ ಮುಳುವಾಯಿತೇ?