ಮುಂಬೈ :ಭಾರತದ ವಿರುದ್ಧದ 2ನೇ ಟೆಸ್ಟ್ನ 3ನೇ ದಿನದಾಟದ ವೇಳೆ ಅತಿಥೇಯ ಸ್ಪಿನ್ನರ್ಗಳನ್ನು ಸಮರ್ಥವಾಗಿ ಎದುರಿಸಲು ನನಗೆ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಆಟ ಸಲಹೆ ನೀಡಿತು ಎಂದು ನ್ಯೂಜಿಲ್ಯಾಂಡ್ ಬ್ಯಾಟರ್ ಡೇರಿಲ್ ಮಿಚೆಲ್ ಹೇಳಿದ್ದಾರೆ.
ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 276 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು ನ್ಯೂಜಿಲ್ಯಾಂಡ್ಗೆ 540 ರನ್ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಅಶ್ವಿನ್ ದಾಳಿಗೆ ಸಿಲುಕಿ ತತ್ತರಿಸುತ್ತಿದ್ದರೆ, ಮಿಚೆಲ್ ಮಾತ್ರ ಅಶ್ವಿನ್ ಸೇರಿದಂತೆ ಎಲ್ಲಾ ಸ್ಪಿನ್ನರ್ಗಳಿಗೂ ತಕ್ಕ ಉತ್ತರ ನೀಡಿದರು.
ಅವರು 92 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 60 ರನ್ ಗಳಿಸಿದರು. ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಔಟಾಗುವ ಮುನ್ನ ಹೆನ್ರಿ ನಿಕೋಲ್ಸ್ ಜೊತೆಗೆ 73 ರನ್ಗಳ ಜೊತೆಯಾಟ ನೀಡಿದರು.
ಮಯಾಂಕ್ ಅವರ ಬ್ಯಾಟಿಂಗ್ ಅನ್ನು ನಾನು ಮಾದರಿಯಾಗಿ ತೆಗೆದುಕೊಂಡೆ. ಅವರು ಆ ರೀತಿ ನಮ್ಮ ಸ್ಪಿನ್ನರ್ಗಳ ಮೇಲೆ ಒತ್ತಡ ತಂದಿದ್ದರು. ಆದರೆ, ಸಿಕ್ಕ ಆರಂಭವನ್ನು ದೊಡ್ಡದಾಗಿ ಬಳಸಿಕೊಳ್ಳಲು ವಿಫಲವಾಗಿದ್ದಕ್ಕೆ ನಿರಾಶೆಯಾಗಿದೆ. ಆದರೂ ಉತ್ತಮ ಜೊತೆಯಾಟ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಮಿಚೆಲ್ 3ನೇ ದಿನದಾಟದ ಬಳಿಕ ಹೇಳಿದರು.
ಮಯಾಂಕ್ ಅಗರ್ವಾಲ್ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗಳಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ 62 ರನ್ಗಳಿಸಿ ಎರಡೂ ಇನ್ನಿಂಗ್ಸ್ನಲ್ಲೂ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ತಮ್ಮ ತಂಡದ ಬ್ಯಾಟರ್ಗಳಿಗೆ ಭಾರತೀಯ ಸ್ಪಿನ್ನರ್ಗಳು ಕಠಿಣವಾಗಿದ್ದಾರೆ ಎನ್ನುವುದನ್ನು ಮಿಚೆಲ್ ಒಪ್ಪಿಕೊಂಡರು.
"ಭಾರತೀಯ ಬೌಲರ್‌ಗಳು ನಿರಂತರವಾಗಿ ನಮ್ಮ ಮೇಲೆ ವಿಭಿನ್ನ ವಿಷಯಗಳ ಮೂಲಕ ಒತ್ತಡ ಹೇರಿದರು. ಇಲ್ಲಿ ನಾವು ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಆದರೆ, ಅದರಿಂದ ಹೊರಬರಲು ನಮ್ಮಿಂದ ಸಾಧ್ಯವಾಗುವುದೆನ್ನೆಲ್ಲಾ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಿಸ್ಸಂಶಯವಾಗಿ ಇದು ತುಂಬಾ ಸವಾಲಿನದ್ದಾಗಿದೆ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಭಾರತದ ಬಿಗಿ ಹಿಡಿತದಲ್ಲಿ 2ನೇ ಟೆಸ್ಟ್: ಸರಣಿ ಗೆಲ್ಲಲು ಕೊಹ್ಲಿಪಡೆಗೆ ಬೇಕು ಕಿವೀಸ್ನ 5 ವಿಕೆಟ್