ಕಟಕ್(ಒಡಿಶಾ):ತಂಡದಲ್ಲಿ ಸ್ಥಾನ ಸಿಗದೇ ನೊಂದ ಮಹಿಳಾ ಕ್ರಿಕೆಟರ್ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದೆ. 26 ವರ್ಷದ ರಾಜಶ್ರೀ ಸ್ವೈನ್ ಜೀವ ಕಳೆದುಕೊಂಡ ಕ್ರೀಡಾಪಟು. ಇಲ್ಲಿನ ದಟ್ಟಾರಣ್ಯದಲ್ಲಿ ಶವ ಪತ್ತೆಯಾಗಿದೆ. ಇದೊಂದು ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಣ್ಯದ ಬಳಿಕ ಬಿಟ್ಟುಹೋಗಿದ್ದ ರಾಜಶ್ರೀ ಅವರ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
4 ದಿನಗಳ ಹಿಂದೆ ಅಂದರೆ ಜನವರಿ 11 ರಂದು ಕ್ರಿಕೆಟರ್ ರಾಜಶ್ರೀ ಸ್ವೈನ್ ಅವರು ನಾಪತ್ತೆಯಾಗಿದ್ದರು. ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಾಗಿ ಒಡಿಶಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಪುರಿ ಜಿಲ್ಲೆಯ ನಿವಾಸಿಯಾದ ರಾಜಶ್ರೀ ಅವರು ಇಲ್ಲಿಗೆ ಬಂದಿದ್ದರು. ಪಂದ್ಯಾವಳಿಗೆ ಆಯ್ಕೆಯಾದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸ್ವೈನ್ ವಿಫಲರಾಗಿದ್ದರು. ಇದು ಅವರಲ್ಲಿ ತೀವ್ರ ಬೇಸರ ತಂದಿತ್ತು ಎಂದು ಗೊತ್ತಾಗಿದೆ.
ಬೇಸರಿಸಿಕೊಂಡಿದ್ದ ರಾಜಶ್ರೀ:ಬುಧವಾರ ತಂಡದ ಘೋಷಣೆಯಾಯಿತು. ರಾಜಶ್ರೀ ಸ್ಥಾನ ಪಡೆಯಲು ವಿಫಲವಾಗಿದ್ದರಿಂದ ಅಳುತ್ತಿದ್ದರು. ಕೆಲ ಹೊತ್ತಿನ ಬಳಿಕ ಅವರು ರೂಮಿನಿಂದ ಹೊರಹೋಗಿದ್ದರು. ನಾವು ತರಬೇತಿಗೆಂದು ಹೋಗಿದ್ದೇವು. ಆ ಸಮಯದಿಂದ ರಾಜಶ್ರೀ ನಾಪತ್ತೆಯಾಗಿಧ್ದರು. ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ನಾಪತ್ತೆ ದೂರು ದಾಖಲಿಸಲಾಯಿತು ಎಂದು ರಾಜಶ್ರೀ ಅವರ ಜೊತೆಗೆ ರೂಮಿನಲ್ಲಿ ಉಳಿದಿದ್ದ ಸಹ ಆಟಗಾರ್ತಿ ಮಾಹಿತಿ ನೀಡಿದರು.
ಕುಟುಂಬದಿಂದ ಕೊಲೆ ಆರೋಪ:ಬಲಗೈ ವೇಗದ ಬೌಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ರಾಜಶ್ರೀ ಸ್ವೈನ್ ಅವರ ದೇಹದಲ್ಲಿ ಗಾಯದ ಗುರುತುಗಳಿವೆ. ಕಣ್ಣುಗಳು ಹಾನಿಗೊಳಗಾಗಿವೆ. ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಆಯ್ಕೆಯಾದ ಇತರರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರೂ ರಾಜಶ್ರೀಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಇದು ನಿರಾಸೆಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.