ನವದೆಹಲಿ: 2023ರ ವಿಶ್ವಕಪ್‌ನಲ್ಲಿ ಭಾರತ ತಂಡದ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಪಂದ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ಅದು ಬ್ಯಾಟಿಂಗ್, ಫೀಲ್ಡಿಂಗ್ ಅಥವಾ ಬೌಲಿಂಗ್ ಆಗಿರಲಿ. ಭಾರತ ತಂಡ 2023ರ ವಿಶ್ವಕಪ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯಗಳನ್ನು ಗೆದ್ದಿದೆ. ಬೌಲಿಂಗ್‌ನಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅದರಲ್ಲೂ ಭಾರತದ ಬೌಲಿಂಗ್ ವಿಭಾಗ ಅಸಾಧಾರಣವಾಗಿ ಕಾಣುತ್ತಿದೆ. ಐವರು ಪ್ರಮುಖ ಬೌಲರ್‌ಗಳು ಮೈದಾನದ ಲಕ್ಷಣಗಳನ್ನು ಲಾಭವಾಗಿ ಬಳಸಿಕೊಳ್ಳುತ್ತಿದ್ದಾರೆ. ಒಂದು ಪಂದ್ಯದಲ್ಲಿ ಸ್ಪಿನ್ನರ್ಗಳು ಮೋಡಿ ಮಾಡಿದರೆ, ಮತ್ತೊಂದರಲ್ಲಿ ವೇಗಿಗಳು ಎದುರಾಳಿಗಳಿಗೆ ಕಂಟಕವಾಗುತ್ತಿದ್ದಾರೆ. ಭಾರತದ ವಿರುದ್ಧ 8 ಪಂದ್ಯಗಳಲ್ಲಿ ಯಾವುದೇ ತಂಡ 300ರ ಗಡಿ ತಲುಪಿಲ್ಲ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಹೊರತಾಗಿ ಆರು ತಂಡಗಳು ಆಲ್ಔಟ್ಗೆ ಗುರಿಯಾಗಿದೆ. ಅಫ್ಘಾನ್ ಮತ್ತು ಬಾಂಗ್ಲಾ 8 ವಿಕೆಟ್ ಗಳನ್ನು ಕಳೆದುಕೊಂಡಿದ್ದವು. ಆಸ್ಟ್ರೇಲಿಯಾ (199), ಪಾಕಿಸ್ತಾನ (191), ಇಂಗ್ಲೆಂಡ್ (129), ಶ್ರೀಲಂಕಾ (55) ಮತ್ತು ದಕ್ಷಿಣ ಆಫ್ರಿಕಾ (83) ದಂತಹ ದಿಗ್ಗಜ ತಂಡಗಳನ್ನು ಭಾರತೀಯ ಬೌಲರ್‌ಗಳು 200ರ ಒಳಗೆ ಕಟ್ಟಿಹಾಕಿದ್ದಾರೆ.
ಭಾರತದ ಬೌಲರ್‌ಗಳ ಈ ಪ್ರದರ್ಶನವನ್ನು ಕಂಡ ಇಂಗ್ಲೆಂಡ್‌ನ ಮಾಜಿ ಆಟಗಾರ ಮೈಕಲ್ ವಾನ್ ಹೊಗಳಿದ್ದಾರೆ. ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ,"ಬುಮ್ರಾ ನಿಮ್ಮನ್ನು ಔಟ್ ಮಾಡದಿದ್ದರೆ, ಮೊಹಮ್ಮದ್ ಸಿರಾಜ್ ಬಿಡುವುದಿಲ್ಲ, ನೀವು ಸಿರಾಜ್ ಅವರಿಂದ ತಪ್ಪಿಸಿಕೊಂಡರೆ, ಮೊಹಮ್ಮದ್ ಶಮಿ ನಿಮ್ಮನ್ನು ಔಟ್ ಮಾಡುತ್ತಾರೆ. ಶಮಿ ಇಲ್ಲದಿದ್ದರೆ ಜಡೇಜಾ, ಜಡೇಜಾನಿಂದ ಪಾರಾದರೆ ಕುಲದೀಪ್ ನಿನ್ನನ್ನು ಬಿಡುವುದಿಲ್ಲ" ಎಂದು ಭಾರತದ ಬಿಗಿ ಬೌಲಿಂಗ್ ದಾಳಿಯ ಬಗ್ಗೆ ವಿಮರ್ಶೆ ಮಾಡಿದ್ದಾರೆ.