ನವದೆಹಲಿ: ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂದು ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದು, 7ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಪಂಜಾಬ್ ವಿರುದ್ಧ ಸೋಲು ಕಂಡಿದೆ. ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚಾಂಪಿಯನ್ ತಂಡ ಒಮ್ಮೆಯೂ 160ರ ಗಡಿ ದಾಟಿಲ್ಲ. ಇನ್ನು ಕಳೆದ ಎರಡೂ ಪಂದ್ಯಗಳಲ್ಲೂ ಕ್ರಮವಾಗಿ 137 ಮತ್ತು 133 ರನ್ಗಳನ್ನಷ್ಟೇ ಸಿಡಿಸಿ ಸೋಲು ಕಂಡಿದೆ.
ಇದೀಗ ಡೆಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ತನ್ನ ರನ್ ಬರವನ್ನು ನೀಗಿಸಿಕೊಳ್ಳುವುದೇ ಎಂದು ನೋಡಬೇಕಿದೆ. ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಇಶಾನ್ ಕಿಶನ್ ಬದಲಿಗೆ ಆಲ್ರೌಂಡರ್ ನಥನ್ ಕೌಲ್ಟರ್ ನೈಲ್ರನ್ನು ಕಣಕ್ಕಿಳಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ರಾಸ್ಸಿ ವಾನ್ ಡರ್ ಡಾಸೆನ್ ಗಾಯಗೊಂಡಿರುವ ಸ್ಟೋಕ್ಸ್ ಬದಲಿಗೆ ತಂಡ ಸೇರಿಕೊಂಡಿದ್ದಾರಾದರೂ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದಿನ ಪಂದ್ಯದಲ್ಲೂ ಆಡಲಿದೆ.