ಶಾರ್ಜಾ: ಪ್ಲೇ ಆಫ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಸ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 129 ರನ್ಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿದೆ.
ಟಾಸ್ ಸೋತು ಶಾರ್ಜಾ ಮೈದಾನದಲ್ಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ 2ನೇ ಓವರ್ನಲ್ಲೇ ನಾಯಕ ರೋಹಿತ್ ಶರ್ಮಾ(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆವೇಶ್ ಖಾನ್ ಓವರ್ನಲ್ಲಿ ರಬಾಡಗೆ ಕ್ಯಾಚ್ ನೀಡಿ ರೋಹಿತ್ ನಿರ್ಗಮಿಸಿದರು.
ಆದರೆ 2ನೇ ವಿಕೆಟ್ಗೆ ಜೊತೆಯಾದ ಡಿಕಾಕ್ ಮತ್ತು ಸೂರ್ಯಕುಮಾರ್ ಯಾದವ್ ನಿಧಾನ ಗತಿಯ ಆಟಕ್ಕೆ ಮುಂದಾದರು. ಆದರೂ 18 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ್ದ ಡಿಕಾಕ್ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ್ದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 33ರನ್ಗಳಿಸಿ ಅಕ್ಷರ್ಗೆ ಎರಡನೇ ಬಲಿಯಾದರು.
ಯಾದವ್ ವಿಕೆಟ್ ಬೀಳುತ್ತಿದ್ದಂತೆ ಮುಂಬೈ ಪತನ ಆರಂಭವಾಯಿತು. ಕಳೆದ ಪಂದ್ಯದ ಹೀರೋ ಸೌರಭ್ ತಿವಾರಿ 15, ಕೀರನ್ ಪೊಲಾರ್ಡ್(6), ಹಾರ್ದಿಕ್ ಪಾಂಡ್ಯ(17) ಕೃನಾಲ್ ಪಾಂಡ್ಯ(13) ಕೌಲ್ಟರ್ ನೈಲ್(1), ಜಯಂತ್ ಯಾದವ್(11) ಡೆಲ್ಲಿ ಬೌಲರ್ಗಳನ್ನು ಎದುರಿಸುವಲ್ಲಿ ವಿಫಲರಾದರು.
ಅದ್ಭುತ ಬೌಲಿಂಗ್ ನಡೆಸಿದ ಆವೇಶ್ ಖಾನ್ 15ಕ್ಕೆ 3, ಅಕ್ಷರ್ ಪಟೇಲ್ 21ಕ್ಕೆ 3, ಎನ್ರಿಚ್ ನಾರ್ಟ್ಜ್ 19ಕ್ಕೆ1 ಮತ್ತು ಅಶ್ವಿನ್ 41ಕ್ಕೆ 1 ವಿಕೆಟ್ ಪಡೆದು ಹಾಲಿ ಚಾಂಪಿಯನ್ನರು ದೊಡ್ಡ ಮೊತ್ತ ಪೇರಿಸದಂತೆ ತಡೆದರು.