ಡಲ್ಲಾಸ್ (ಯುಎಸ್):ನಿಕೋಲಸ್ ಪೂರನ್ ಅವರ ಶತಕದ ನೆರವಿನಿಂದ ಮೇಜರ್ ಲೀಗ್ ಕ್ರಿಕೆಟ್ನ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಎಂಐ ನ್ಯೂಯರ್ಕ್ ಗೆದ್ದುಕೊಂಡಿದೆ. ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಎಂಐ ನ್ಯೂಯಾರ್ಕ್ 7 ವಿಕೆಟ್‌ಗಳಿಂದ ಸಿಯಾಟಲ್ ಓರ್ಕಾಸ್ ಮಣಿಸಿ ಉದ್ಘಾಟನಾ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಂಐ ನ್ಯೂಯಾರ್ಕ್ ತಂಡ ಸಿಯಾಟಲ್ ಓರ್ಕಾಸ್ ಅನ್ನು ನಿಗದಿತ ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್ಗೆ ಕಟ್ಟಿ ಹಾಕಿತು. ಈ ಗುರಿಯನ್ನು ಎಂಐಎನ್ ಕೇವಲ 16 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡ ಪೂರೈಸಿತ್ತು. ಆರಂಭಿಕ ಓವರ್‌ನ ಮೂರನೇ ಎಸೆತದಲ್ಲಿ ಇಮಾದ್ ವಾಸಿಮ್ ಸ್ಟೀವನ್ ಟೇಲರ್ ಅವರ ವಿಕೆಟ್ ಉರುಳಿಸಿದರು. ಇದರಿಂದ ನ್ಯೂಯಾರ್ಕ್ ತಂಡ ಉತ್ತಮ ಆರಂಭ ಪಡೆಯಲಿಲ್ಲ.
ಆದರೆ ಮೂರನೇ ವಿಕೆಟ್ ಆಗಿ ಬಂದ ಪೋರನ್ ಮೊದಲ ಓವರ್‌ನ ಕೊನೆಯ ಎರಡು ಬಾಲ್ಗೆ ಭರ್ಜರಿ ಸಿಕ್ಸ್ ದಾಖಲಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದರು. ಅದರಂತೆ ಮೂರನೇ ಓವರ್‌ನಲ್ಲಿ ಡ್ವೈನ್ ಪ್ರಿಟೋರಿಯಸ್ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಹೊಡೆದ ವೆಸ್ಟ್ ಇಂಡೀಸ್ ದೈತ್ಯ ತಮ್ಮ ಪ್ರಚಂಡ ಫಾರ್ಮ್ ಪ್ರದರ್ಶಿಸಿದರು.
ಅತ್ತ ಕ್ರೀಸ್ನಲ್ಲಿದ್ದ ಮೊತ್ತೊಬ್ಬ ಆರಂಭಿಕ ಬ್ಯಾಟರ್ ಶಯನ್ ಜಹಾಂಗೀರ್ ಐದನೇ ಓವರ್‌ನಲ್ಲಿ ವೇಯ್ನ್ ಪಾರ್ನೆಲ್‌ಗೆ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜಹಾಂಗೀರ್ ಮತ್ತು ಪೂರನ್ ಮೂರನೇ ವಿಕೆಟ್ಗೆ 62 ರನ್ ಜೊತೆಯಾಟ ಮಾಡಿದ್ದರು. ಅದರಲ್ಲಿ 52 ರನ್ ಪೂರನ್ ಒಬ್ಬರದ್ದೇ ಆಗಿತ್ತು. ನಂತರ ಬಂದ ಡೆವಾಲ್ಡ್ ಬ್ರೆವಿಸ್ ಪೂರನ್ಗೆ ಕ್ರೀಸ್ ಬಿಟ್ಟುಕೊಟ್ಟರು. ಇದರಿಂದ ಪೂರನ್ ಓರ್ಕಾಸ್ನ ಬೌಲರ್ಗಳ ಮೇಲೆ ತಮ್ಮ ಸವಾರಿ ಮುಂದುವರೆಸಿದರು.
20 ರನ್ಗಳಿಸಿದ್ದಾಗ ಡೆವಾಲ್ಡ್ ಬ್ರೆವಿಸ್ ರನ್ಔಟ್ಗೆ ಬಲಿಯಾದರು. ಅವರ ನಂತರ ಬಂದ ಟಿಮ್ ಡೇವಿಡ್ (10) ಸಹ ಅಬ್ಬರಿಸುತ್ತಿದ್ದ ಪುರನ್ಗೆ ಕ್ರೀಸ್ ಬಿಟ್ಟುಕೊಟ್ಟರು. ಇದರಿಂದ ಪೂರನ್ 55 ಎಸೆತಗಳಲ್ಲಿ 13 ಸಿಕ್ಸ್ ಮತ್ತು 10 ಬೌಂಡರಿಯಿಂದ 137 ರನ್ ಕಲೆಹಾಕಿ ಅಜೇಯರಾಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಇವರ ಅಬ್ಬರದ ಆಟದ ನೆರವಿನಿಂದ ಎಂಐ ನ್ಯೂಯಾರ್ಕ್ 4 ಓವರ್ ಬಾಕಿ ಇರುವಂತೆ ಪಂದ್ಯವನ್ನು ಗೆದ್ದುಕೊಂಡಿತು.
ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಯಾಟಲ್ ಓರ್ಕಾಸ್ಗೆ ಕ್ವಿಂಟನ್ ಡಿ ಕಾಕ್ ಅವರು ಅರ್ಧಶತಕ ಆಸರೆ ಆಯಿತು. ಹರಿಣಗಳ ನಾಡಿನ ಆರಂಭಿಕ ಬ್ಯಾಟರ್ ಒಂದೆಡೆ ವಿಕೆಟ್ ಹೋಗುತ್ತಿದ್ದರೂ ಅಮೋಘ ಫಾರ್ಮ್ ಪ್ರದರ್ಶಿಸಿದರು. ಡಿ ಕಾಕ್ ಅಲ್ಲದೇ ತಂಡಕ್ಕೆ ಶೆಹನ್ ಜಯಸೂರ್ಯ (19), ಶುಭಂ ರಂಜೆನೆ (29) ಮತ್ತು ಡ್ವೈನ್ ಪ್ರಿಟೋರಿಯಸ್ (21) ನೆರವಾದರು. ಎಂಐ ನ್ಯೂಯಾರ್ಕ್ ಪರ ಬೋಲ್ಟ್ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಪಡೆದು ಎದುರಾಳಿಗಳನ್ನು ನಿಗದಿತ ಓವರ್‌ನಲ್ಲಿ 183 ರನ್ಗೆ ಕಟ್ಟಿಹಾಕಿದ್ದರು.
ಇದನ್ನೂ ಓದಿ:Deodhar Trophy: ಶಿವ ದುಬೆ ಅಮೋಘ ಪ್ರದರ್ಶನ; ಉತ್ತರದ ವಿರುದ್ಧ ಗೆದ್ದು ಬೀಗಿದ ಪಶ್ಚಿಮ ವಲಯ