ನವದೆಹಲಿ :ಭಾರತವು ವಿಶ್ವದ ಇತರ ಭಾಗಗಳಿಗೆ ನೀಡಿದ ಗಮನಾರ್ಹ ಉಡುಗೊರೆಗಳಲ್ಲಿ ಧ್ಯಾನವು ಒಂದು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
ಸೋಮವಾರ ವಿಶ್ವದಾದ್ಯಂತ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಮಾಡಲಾಗುತ್ತಿದೆ. ಈ ದಿನ ಪ್ರಯುಕ್ತ ಕ್ರಿಕೆಟಿಗರು, ಸಿನಿಮಾ ನಟರು ಹಾಗೂ ಇನ್ನಿತರೆ ಗಣ್ಯರು ಯೋಗಾಸನ ಮಾಡುವ ಮೂಲಕ ತಮ್ಮ ಅಭಿಮಾನಿ ಸಮೂಹಕ್ಕೆ ಶುಭಾಶಯ ಕೋರಿದ್ದಾರೆ.
ತಾವೂ ಶೀರ್ಷಾಸನ ಮಾಡುವ ಚಿತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಸೆಹ್ವಾಗ್, ಯೋಗ ಮತ್ತು ಧ್ಯಾನ ಭಾರತ ಇಡೀ ವಿಶ್ವಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳಲ್ಲಿ ಒಂದು. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಯೋಗಾಸನ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಶುಭ ಕೋರಿದ್ದಾರೆ. ಪ್ರತಿಯೊಬ್ಬರಿಗೂ 7ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್" ಯೋಗ ನಿಮ್ಮ ಜೀವನಕ್ಕೆ ಕೆಲವೊಂದಷ್ಟು ವರ್ಷಗಳನ್ನು ಸೇರಿಸುತ್ತದೆ ಎಂದು ತಾವೇ ಸ್ವತಃ ಯೋಗ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇವರಲ್ಲದೆ ಭಾರತದ ಹಲವಾರು ಕ್ರೀಡಾಪಟುಗಳು ಯೋಗ ದಿನದ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ "ಪ್ರಸ್ತುತ ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಯೋಗವು ಭರವಸೆಯ ಆಶಾಕಿರಣವಾಗಿದೆ. ಈಗ ಎರಡು ವರ್ಷಗಳಿಂದ, ಭಾರತದಲ್ಲಿ ಅಥವಾ ಪ್ರಪಂಚದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ. ಆದರೆ, ಯೋಗದ ಉತ್ಸಾಹ ಕಡಿಮೆಯಾಗಿಲ್ಲ" ಎಂದು ಮೋದಿ ಹೇಳಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ಆಟಗಾರ್ತಿಯರು ಸ್ಲೆಡ್ಜಿಂಗ್ಗೆ ಪ್ರಯತ್ನಿಸಿದ್ರು, ನಾವು ತಲೆಕಡೆಸಿಕೊಳ್ಳಲಿಲ್ಲ : ದೀಪ್ತಿ ಶರ್ಮಾ